ಪುತ್ತೂರು: ತಿಮರೋಡಿ ವಿರುದ್ಧ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಗಡಿಪಾರು (Exile) ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ, ವಿಚಾರಣೆ ಮರುನಡೆಸುವಂತೆ ಮಹತ್ವದ ನಿರ್ದೇಶನ ನೀಡಿದೆ. ನ್ಯಾ. ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಪೀಠ ಈ ಆದೇಶವನ್ನು ಹೊರಡಿಸಿದೆ.
ಉಪ ವಿಭಾಗಾಧಿಕಾರಿಗಳಿಂದ ಹೊರಬಿದ್ದ ಗಡಿಪಾರು ಆದೇಶದಲ್ಲಿ ಕಾನೂನುಸಮ್ಮತವಾದ ಕಾರಣಗಳು ಹಾಗೂ ಸಂಬಂಧಿಸಿದ ವಿಧಿಗಳು ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ ಎಂಬ ಆಧಾರದ ಮೇಲೆ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಅಧಿಕಾರಿಗಳು ಗಡಿಪಾರು ಆದೇಶ ಹೊರಡಿಸುವುದು ಕಾನೂನುಬದ್ಧವಾದ ಪ್ರಕ್ರಿಯೆಯನ್ನು ಅನುಸರಿಸಿಯೇ ಆಗಬೇಕು ಎಂದು ಸ್ಪಷ್ಟಪಡಿಸಿದೆ.
ಕೋರ್ಟ್ ನೀಡಿದ ನಿರ್ದೇಶನದ ಪ್ರಕಾರ ಪುತ್ತೂರು ಉಪ ವಿಭಾಗಾಧಿಕಾರಿಗಳು ಹೊಸದಾಗಿ ವಿಚಾರಣೆ ನಡೆಸಬೇಕು.ವಿಚಾರಣೆ ಪೂರ್ಣಗೊಂಡ ನಂತರ 15 ದಿನಗಳೊಳಗೆ ಸೂಕ್ತವಾದ ಮತ್ತು ಕಾನೂನುಬದ್ಧವಾದ ಹೊಸ ಆದೇಶ ಹೊರಡಿಸಬೇಕು. ಹೊರಡಿಸುವ ಯಾವುದೇ ಆದೇಶದಲ್ಲಿ ಸೂಕ್ತ ಕಾರಣಗಳು, ಸಾಕ್ಷ್ಯಾಧಾರಗಳು ಮತ್ತು ಕಾನೂನು ವಿಭಾಗಗಳು (Sections) ಸ್ಪಷ್ಟವಾಗಿ ಉಲ್ಲೇಖವಾಗಿರಬೇಕು.
ಈ ತೀರ್ಪು ಗಡಿಪಾರು ಆದೇಶಗಳನ್ನು ಹೊರಡಿಸುವಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಮಾನದಂಡಗಳನ್ನು ಪಾಲಿಸಬೇಕೆಂಬುದನ್ನು ಮತ್ತೊಮ್ಮೆ ನೆನಪಿಸಿದೆ. ತಿಮರೋಡಿ ವಿರುದ್ಧದ ಮೂಲ ಆದೇಶ ರದ್ದುಪಡುವುದರಿಂದ ಪ್ರಕರಣ ಈಗ ಮರು ವಿಚಾರಣೆಗೆ ಮರಳಿದ್ದು, ಹೊಸ ಆದೇಶಕ್ಕಾಗಿ ಈಗ ಕಾದು ನೋಡಬೇಕಾಗಿದೆ.

