ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹೆಚ್ಚಿಸಲು ಮಹತ್ವದ ತ್ರಿಪಕ್ಷೀಯ ಒಪ್ಪಂದಕ್ಕೆ ಬಂದಿವೆ. ಆಸ್ಟ್ರೇಲಿಯಾದ ಪ್ರಧಾನಿ ಆಂಟನಿ ಅಲ್ಬನೀಸ್, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಶನಿವಾರ ಈ ಘೋಷಣೆಯನ್ನು ಮಾಡಿದರು.
ಕೆನಡಾದ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ–ಕೆನಡಾ ನಡುವಿನ ಸಂಬಂಧಗಳು ಸುಧಾರಿಸುತ್ತಿರುವುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ ಎಂದು ವಲಯದ ವೀಕ್ಷಕರು ತಿಳಿಸಿದ್ದಾರೆ.
ಶೃಂಗಸಭೆಯ ವೇದಿಕೆಯಲ್ಲಿ ಮೂವರು ನಾಯಕರೂ ತ್ರಿಪಕ್ಷೀಯ ತಂತ್ರಜ್ಞಾನ ಮತ್ತು ಸಂಶೋಧನಾ ಪಾಲುದಾರಿಕೆಯನ್ನು ಘೋಷಿಸಿದ್ದು, ಶುದ್ಧ ಇಂಧನ, ಉದಯೋನ್ಮುಖ ತಂತ್ರಜ್ಞಾನ ಹಾಗೂ ಅಗತ್ಯವಾದ ಪೂರೈಕೆ ಸರಪಳಿಗಳ ಸ್ಥಿರತೆಯಲ್ಲಿ ಸಹಕಾರ ಒದಗಿಸಲು ಒತ್ತು ನೀಡಲಾಗಿದೆ. ಇದರಿಂದ ಮೂರು ದೇಶಗಳ ನಡುವಿನ ನವೀನತೆ, ಅಭಿವೃದ್ದಿ ಮತ್ತು ತಾಂತ್ರಿಕ ಸಾಮರ್ಥ್ಯ ಮತ್ತಷ್ಟು ಬಲಪಡುವ ನಿರೀಕ್ಷೆಯಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, “ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತದ ನಡುವಿನ ಪಾಲುದಾರಿಕೆಯನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ. ಇದು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಮೂರು ಖಂಡಗಳ ನಡುವಿನ ಸಹಯೋಗವನ್ನು ಬಲಪಡಿಸುತ್ತದೆ,” ಎಂದು ಹೇಳಿದ್ದಾರೆ.
ಪಾಲುದಾರಿಕೆಯು ಮೂರು ದೇಶಗಳ ನೈಸರ್ಗಿಕ ಬಲಗಳನ್ನು ಆಧರಿಸಿದ್ದು, ಹಸಿರು ಇಂಧನ ಸಂಶೋಧನೆ, ಪ್ರಮುಖ ಖನಿಜಗಳ ಪೂರೈಕೆ ಸರಪಳಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

