ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಹಾಗೂ ಸಂಪುಟ ಪುನರ್‌ರಚನೆ ವಿಷಯಗಳ ಬಗ್ಗೆ ಚರ್ಚೆ ಜೋರಾಗಿದೆ. ಇದೇ ಸಂದರ್ಭದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ತಮ್ಮನ್ನೂ ಕೂಡ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯೆಂದು ಘೋಷಿಸಿ ರಾಜಕೀಯ ವಲಯದಲ್ಲಿ ಕುತೂಹಲ ಹುಟ್ಟುಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, “ನಾನೂ ಕೂಡ ಸಿಎಂ ಆಕಾಂಕ್ಷಿ. ಸಿಎಂ ಆಗುವ ಆಸೆ ನನಗಿದೆ. ಆದರೆ ಈಗ ಆ ಸಂದರ್ಭವಿಲ್ಲ. ಸಿಎಂ ಬದಲಾವಣೆಯ ವಿಷಯ ಬಂದಾಗ ಆ ಬಗ್ಗೆ ಚರ್ಚಿಸಬಹುದು,” ಎಂದು ಸ್ಪಷ್ಟಪಡಿಸಿದರು.
ಮುಂದುವರಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿ, “ಯಾರಾದರೊಬ್ಬರ ಮನೆಗೆ ಊಟಕ್ಕೆ ಹೋದರೆ ತಪ್ಪೇನು? ಸತೀಶ್ ಜಾರಕಿಹೊಳಿ ಮನೆಗೆ ಊಟಕ್ಕೆ ಸೇರಿದ್ದೇವೆ. ಅಲ್ಲಿ ಸಾಮಾನ್ಯವಾಗಿ ಚರ್ಚೆ ನಡೆದಿದ್ದು, ಅದರಲ್ಲಿ ರಾಜಕೀಯ ಮಾತುಕತೆ ನಡೆದರೂ ಅದು ಸಹಜ. ನಮ್ಮಲ್ಲಿ ಹೈಕಮಾಂಡ್ ತುಂಬಾ ಬಲವಾಗಿದ್ದು, ಇದುವರೆಗೆ ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ,” ಎಂದರು.
ಸಿಎಂ ಸಿದ್ದರಾಮಯ್ಯ ಕುರಿತು ಮಾತನಾಡಿದ ಪರಮೇಶ್ವರ್, “ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುವುದಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅವರು ಎರಡುವರೆ ವರ್ಷಗಳ ಹಿಂದೆ ಸಿಎಲ್ಸಿ ಸಭೆಯಲ್ಲಿ ಆಯ್ಕೆಯಾಗಿದ್ದರು. ಮಧ್ಯದಲ್ಲಿ ಬದಲಾವಣೆ ಮಾಡುವ ಪ್ರಶ್ನೆ ಹೈಕಮಾಂಡ್ಗೆ ಬಿದ್ದಿದ್ದು, ಈಗಲಾದರೂ ಬದಲಾವಣೆ ಮಾಡುತ್ತಾರೆ ಎಂಬುದು ನನಗನಿಸುತ್ತಿಲ್ಲ,” ಎಂದರು.
ಕೊನೆಯಾಗಿ, “ಹೈಕಮಾಂಡ್ ತೀರ್ಮಾನವೇ ಅಂತಿಮ,” ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟ ಸಂದೇಶ ನೀಡಿದ್ದಾರೆ.

