ಬೆಳಗಾವಿ, ನವೆಂಬರ್ 26: ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ದುರ್ಮರಣರಾದ ಘಟನೆ ರಾಜ್ಯದಲ್ಲಿ ದುಃಖದ ಛಾಯೆ ಮೂಡಿಸಿದೆ.
ಜೇವರ್ಗಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೀಳಗಿ ಸೇರಿ ಮೂವರು ಮೃತಪಟ್ಟಿದ್ದಾರೆ. ವಿಜಯಪುರದಿಂದ ಕಲಬುರಗಿ ಕಡೆಗೆ ಆಗಮಿಸುತ್ತಿದ್ದ ವೇಳೆ ಜೇವರ್ಗಿ ಬೈಪಾಸ್ ಬಳಿ ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೃತ್ಯು ಸಂಭವಿಸಿದೆ. ಕಾರು ಸಂಪೂರ್ಣ ನಾಶವಾಗಿರುವ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮಹಾಂತೇಶ್ ಬೀಳಗಿ ಅವರು ಪ್ರಸ್ತುತ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ (KSMC)ನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯನಿಷ್ಠತೆ, ಪ್ರಾಮಾಣಿಕತೆ ಮತ್ತು ಸರಳ ಸ್ವಭಾವದ ಕಾರಣ ರಾಜ್ಯದ ಆಡಳಿತ ವಲಯದಲ್ಲಿ ಅವರು ಗೌರವಾನ್ವಿತ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದರು.
ಅಪಘಾತದ ಬಳಿಕ ಮಹಾಂತೇಶ್ ಬೀಳಗಿ ಅವರ ಮೃತದೇಹವನ್ನು ಕಲಬುರಗಿಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗಕ್ಕೆ ಸಾಗಿಸಲಾಯಿತು. ಮೃತರ ಊರಾದ ರಾಮದುರ್ಗದಲ್ಲಿ ಕುಟುಂಬಸ್ಥರ ಆಕ್ರಂದನ ಮಿತಿಮೀರಿ ಹರಿದಿದ್ದು, ಆತ್ಮೀಯರು, ಬಂಧು–ಬಳಗ ಮತ್ತು ಸಾರ್ವಜನಿಕರು ಕಣ್ಣೀರು ಹಾಕಿದರು.
ಸಾರ್ವಜನಿಕ ದರ್ಶನಕ್ಕಾಗಿ ಮೃತದೇಹವನ್ನು ಇರಿಸಲಾಗಿದ್ದು, ನಂತರ ಹಲಗತ್ತಿ ಬಳಿಯ ಪಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು. ಹಲವಾರು ಗಣ್ಯರು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾವಿರಾರು ನಾಗರಿಕರು ಅಂತಿಮ ನಮನ ಸಲ್ಲಿಸಿದರು.ರಾಜ್ಯವು ಪರಿಶ್ರಮಿ ಮತ್ತು ಜನಸೇವೆಗೆ ಬದ್ಧನಾಗಿದ್ದ ಒಬ್ಬ ಉತ್ತಮ ಆಡಳಿತಗಾರನನ್ನು ಕಳೆದುಕೊಂಡಿದೆ ಎಂದು ವಿವಿಧ ವಲಯಗಳಿಂದ ಸಂತಾಪ ವ್ಯಕ್ತವಾಗಿದೆ.
ಚಾಲಕನ ವಿರುದ್ಧ ‘FIR’ ದಾಖಲು
ಭೀಕರ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗದಿಂದ ವಾಹನ ಚಾಲನೆ ಎಂದು ಮಹಾಂತೇಶ್ ಸಂಬಂಧಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರು ಚಾಲಕ ಅರೋಕಿಯಾ ಅಂಥೋನಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ವರದಿ: ದಯಾನಂದ ಎಂ.
ಸಂಪೂರ್ಣ ನ್ಯೂಸ್ – ಬೆಳಗಾವಿ

