ಚಿತ್ರದುರ್ಗ, ನವೆಂಬರ್ 26: ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ದಾಖಲಾಗಿದ್ದ ಪ್ರಮುಖ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ಬೆಳವಣಿಗೆ ಎದುರಾಗಲಿದೆ. ಪ್ರಕರಣದ ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎರಡನೇ ಸೆಷನ್ಸ್ ಹಾಗೂ ಜಿಲ್ಲಾ ನ್ಯಾಯಾಲಯವು ಇಂದು ಮಧ್ಯಾಹ್ನ 2:45ಕ್ಕೆ ತೀರ್ಪನ್ನು ಪ್ರಕಟಿಸಲು ಕಾಯ್ದಿರಿಸಿದೆ.
ಮುರುಘಾ ಮಠದ ವಸತಿ ಶಾಲೆಯಲ್ಲಿ ಓದುತ್ತಿದ್ದ ಬಡ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಮುರುಘಾಶ್ರೀಗಳು ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ 2022ರ ಆಗಸ್ಟ್ 26ರಂದು ಮೊದಲ ಬಾರಿಗೆ ಕೇಳಿಬಂದಿತ್ತು. ಇದೇ ಹಿನ್ನೆಲೆಯಲ್ಲಿ ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು. ಬಳಿಕ ಮತ್ತೊಂದು ಪ್ರಕರಣವೂ ದಾಖಲಾಗಿದ್ದು, ಈ ಘಟನೆ ದೇಶವ್ಯಾಪಿ ಗಮನ ಸೆಳೆಯಿತು.
ಪ್ರಕರಣದ ತನಿಖೆಯ ವೇಳೆ ಮುರುಘಾ ಶ್ರೀ ಜೈಲುವಾಸ ಅನುಭವಿಸಿದ್ದರು. ಮೊದಲ ಕೇಸ್ ವಿಚಾರಣೆ ಈಗಾಗಲೇ ಸಂಪೂರ್ಣಗೊಂಡಿದ್ದು, ಎಲ್ಲ ಸಾಕ್ಷ್ಯಾಧಾರಗಳು, ವಾದ–ಪ್ರತಿವಾದಗಳ ನಂತರ ಇದೀಗ ಕೋರ್ಟ್ ತೀರ್ಪು ಸಿದ್ದವಾಗಿದೆ. ಇಂದು ಮಧ್ಯಾಹ್ನ 2:45ಕ್ಕೆ ಈ ಹೈಪ್ರೊಫೈಲ್ ಪ್ರಕರಣದ ಕುರಿತು ಕೋರ್ಟ್ ಮಹತ್ವದ ತೀರ್ಪನ್ನು ನೀಡಲಿದೆ.

