ಸಿರಿಗೆರೆ: ನಮ್ಮ ಮಠದ ಶಿಷ್ಯರು, ಕರ್ನಾಟಕ ವಿಧಾನಸಭೆಯ ಹಿರಿಯ ಶಾಸಕರು, ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು (95) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ.
ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ, ದಾನಶೀಲತೆಯಿಂದ ಹೆಸರಾದ ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಸದ್ಗತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಪರಶಿವನು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ನೀಡಲೆಂದು ಶ್ರೀ ತರಳಬಾಳು ಜಗದ್ಗುರುಗಳು ಪ್ರಾರ್ಥಿಸಿದ್ದಾರೆ.
ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಅವರು, ಶಿಕ್ಷಣ ಕ್ಷೇತ್ರದ ಮೂಲಕ “ಕರ್ನಾಟಕದ ಮ್ಯಾಂಚೆಸ್ಟರ್” ಎಂದೇ ಖ್ಯಾತಿಯಲ್ಲಿದ್ದ ದಾವಣಗೆರೆಯನ್ನು “ಕರ್ನಾಟಕದ ಆಕ್ಸ್‌ಫರ್ಡ್” ಆಗಿ ರೂಪಿಸಿದ ಮಹತ್ವದ ಪಾತ್ರವಹಿಸಿದ್ದರು ಎಂದು ಶ್ರೀ ತರಳಬಾಳು ಜಗದ್ಗುರುಗಳು ಪ್ರಶಂಸಿಸಿದ್ದಾರೆ.
ದಶಕಗಳ ರಾಜಕೀಯ ಅನುಭವ
ಕರ್ನಾಟಕ ರಾಜಕೀಯದಲ್ಲಿ ‘ಅಜಾತಶತ್ರು’ ಎಂದೇ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅವರು, ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿ ಸಚಿವರಾಗಿ ಅಪಾರ ಕೊಡುಗೆ ನೀಡಿದ್ದಾರೆ.
ಸಮಾಜ ಮತ್ತು ಧರ್ಮಕ್ಕೆ ಅಪಾರ ಸೇವೆ
ಸಮಾಜದ ಹಿರಿಯ ಮುಖಂಡರಾಗಿದ್ದ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸಮುದಾಯದ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಮಹತ್ತರ ಸೇವೆ ಸಲ್ಲಿಸಿದ್ದರು. ಗುರು–ಲಿಂಗ–ಜಂಗಮ ಆರಾಧನೆಗೆ ಬದ್ಧರಾಗಿದ್ದ ಶಾಮನೂರು ಶಿವಶಂಕರಪ್ಪನವರ ಅಗಲುವಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ತುಂಬು ಜೀವನ ಭವ್ಯ ಯಶೋಗಾಥೆಯಾಗಿ ಸದಾ ಸ್ಪೂರ್ತಿದಾಯಕವಾಗಿರಲಿದೆ ಎಂದು ಶ್ರೀ ತರಳಬಾಳು ಜಗದ್ಗುರುಗಳು ತಿಳಿಸಿದ್ದಾರೆ.

