ಮುಂಬೈ, ಡಿಸೆಂಬರ್ 15: ಎರಡನೇ ವಾರಾಂತ್ಯದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಿನಿಮಾ ‘ಧುರಂಧರ್’ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮಳೆ ಸುರಿಸಿದೆ. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ಗಡಿ ದಾಟಿರುವ ಈ ಸಿನಿಮಾ, ವಿಶ್ವದಾದ್ಯಂತ ಒಟ್ಟು 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ದಿನದಿಂದಲೇ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ನೀಡುತ್ತಿರುವುದು ಚಿತ್ರದ ಯಶಸ್ಸಿಗೆ ಸಾಕ್ಷಿಯಾಗಿದೆ.
ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಮ್ ಪಾಲ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಸೇರಿದಂತೆ ಅನುಭವಿ ತಾರಾಗಣದ ಸಮೂಹ ಈ ಚಿತ್ರದಲ್ಲಿದೆ. ಈ ಸಿನಿಮಾವನ್ನು ಆದಿತ್ಯ ಧರ್ ಅವರು ನಿರ್ಮಿಸಿ, ಬರೆದು, ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಧರ್ ಹಾಗೂ ಜ್ಯೋತಿ ದೇಶಪಾಂಡೆ ಸಹ ನಿರ್ಮಾಪಕರಾಗಿದ್ದಾರೆ.
ವಿಕಾಸ್ ನೌಲಾಖಾ ಅವರ ಛಾಯಾಗ್ರಹಣ, ಶಿವಕುಮಾರ್ ಪಣಿಕ್ಕರ್ ಅವರ ಸಂಕಲನ ಚಿತ್ರಕ್ಕೆ ಬಲ ನೀಡಿದೆ. ಶಾಶ್ವತ್ ಸಚ್ ದೇವ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಡಿಸೆಂಬರ್ 5ರಂದು ಬಿಡುಗಡೆಯಾದ ಈ ಸಿನಿಮಾ 214 ನಿಮಿಷಗಳ (ಮೂರುವರೆ ಗಂಟೆ) ಅವಧಿಯದ್ದಾಗಿದ್ದರೂ, ಇಡೀ ಸಮಯ ಪ್ರೇಕ್ಷಕರನ್ನು ಆಸನದಿಂದ ಕದಲಿಸದೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸುಮಾರು 140 ಕೋಟಿ ರೂ. ಅಂದಾಜು ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ‘ಧುರಂಧರ್’ ಸಿನಿಮಾ, ಡಿಸೆಂಬರ್ 15ರ ವೇಳೆಗೆ ಸುಮಾರು 545.6 ಕೋಟಿ ರೂ. ಗಳಿಕೆ ದಾಖಲಿಸಿದೆ. ಇದು ಚಿತ್ರದ ಭರ್ಜರಿ ಯಶಸ್ಸನ್ನು ಸ್ಪಷ್ಟಪಡಿಸುತ್ತದೆ.
ಚಿತ್ರವನ್ನು ನೋಡಿದ ಹಲವಾರು ವಿಮರ್ಶಕರು, “ರಣವೀರ್ ಸಿಂಗ್ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಅಕ್ಷಯ್ ಖನ್ನಾ ರಣವೀರ್ ಸಿಂಗ್ ಜೊತೆ ಸಮಬಲದ ಪೈಪೋಟಿ ನೀಡಿದರೆ, ಆರ್. ಮಾಧವನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಎಸ್ಪಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಚರಿತ್ರನಟ ರಾಕೇಶ್ ಬೇಡಿ ಪ್ರಮುಖ ಪಾತ್ರದಲ್ಲಿ ಮೆಚ್ಚುಗೆ ಪಡೆದಿದ್ದು, ಸೌಮ್ಯಾ ಟಂಡನ್, ರಾಜ್ ಜುಸ್ಟಿ, ಡಾನಿಶ್ ಪಂಡೊರ್, ಮಾನವ್ ಗೋಹಿಲ್, ಬಿಮಲ್ ಒಬೆರಾಯ್ ಸೇರಿದಂತೆ ಹಲವರು ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

