ಮಂಗಳೂರು: ನಗರದ ಆರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಮಾಹಿತಿ ಲಭ್ಯವಾದ ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ, ಪೊಲೀಸ್ ಪಡೆ ಹಾಗೂ ಶ್ವಾನದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಆರಂಭಿಸಿದೆ.
ಭದ್ರತಾ ಕ್ರಮವಾಗಿ ಆರ್‌ಟಿಒ ಕಚೇರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಕಚೇರಿಯಿಂದ ಹೊರಗೆ ಕಳುಹಿಸಲಾಗಿದ್ದು, ಕಟ್ಟಡದ ಒಳಭಾಗ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸೂಕ್ಷ್ಮ ತಪಾಸಣೆ ನಡೆಯುತ್ತಿದೆ.
ಮೂಲಗಳ ಪ್ರಕಾರ, ರವಿವಾರ ರಾತ್ರಿ ಆರ್‌ಟಿಒ ಕಚೇರಿಯ ಇಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಸೋಮವಾರ ಮಧ್ಯಾಹ್ನ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಂಪೂರ್ಣ ತಪಾಸಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಪಡಬಾರದೆಂದು ಪೊಲೀಸರು ಮನವಿ ಮಾಡಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದ್ದು, ಬೆದರಿಕೆ ಇಮೇಲ್‌ನ ಮೂಲ ಪತ್ತೆಗೆ ಸೈಬರ್ ತಂಡ ಕ್ರಮ ಕೈಗೊಂಡಿದೆ.

