ಮಡಿಕೇರಿ, ಡಿಸೆಂಬರ್ 15: ಕೇರಳ ರಾಜ್ಯಕ್ಕೆ ಸೇರಿದ್ದ ಖಾಸಗಿ ಬಸ್ ಒಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಇಂದು ಬೆಳಿಗ್ಗೆ ದಕ್ಷಿಣ ಕೊಡಗಿನ ಮಾಕುಟ್ಟ ಹೆದ್ದಾರಿ ವ್ಯಾಪ್ತಿಯಲ್ಲಿ ನಡೆದಿದೆ.
ಮಾಕುಟ್ಟದ ಆಂಜನೇಯ ದೇವಾಲಯದ ಸಮೀಪ ಬಸ್ ಸಂಚರಿಸುತ್ತಿದ್ದಾಗ ಅಚಾನಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬಸ್‌ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕರು ತಕ್ಷಣ ಎಚ್ಚೆತ್ತುಕೊಂಡು ಹೊರಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದರು. ಆದರೆ ಅಷ್ಟೊತ್ತಿಗಾಗಲೇ ಬಸ್ ಸಂಪೂರ್ಣವಾಗಿ ಅಗ್ನಿಗೆ ಆಹುತಿಯಾಗಿತ್ತು. ಈ ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬಂದಿಲ್ಲ. ಪ್ರಕರಣ ಸಂಬಂಧ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ.

