ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ “ಮೋದಿ, ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ” ಎಂಬ ಘೋಷಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದರು.
ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈ ವಿಚಾರವನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷದ ನಾಯಕತ್ವ ಈ ಹೇಳಿಕೆಗಳಿಗೆ ಹೊಣೆ ಹೊತ್ತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಕಿರಣ್ ರಿಜಿಜು, ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾಧಿ ಅಗೆಯುವ ಬಗ್ಗೆ ಚರ್ಚೆ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. ಇದರಿಂದ ಕಾಂಗ್ರೆಸ್ ರಾಜಕೀಯ ಕೀಳುಮಟ್ಟಕ್ಕೆ ಇಳಿದಿದೆ. ದೇಶಕ್ಕೆ ಇದಕ್ಕಿಂತ ದುರಾದೃಷ್ಟಕರ ಘಟನೆ ಮತ್ತೊಂದಿಲ್ಲ. ಈ ಹೇಳಿಕೆಗಳಿಗೆ ಪಕ್ಷದ ನಾಯಕತ್ವ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಕಿರಣ್ ರಿಜಿಜು ಅವರ ಮಾತಿಗೆ ಸದನದಲ್ಲಿದ್ದ ಇತರ ಸಂಸದರು ಮತ್ತು ಸಚಿವರು ಸಹ ಬೆಂಬಲ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಅನೇಕ ಬಿಜೆಪಿ ಸಂಸದರು ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕೆಂದು ಒಮ್ಮತದಿಂದ ಆಗ್ರಹಿಸಿದರು.
ಇನ್ನು ರಾಜ್ಯಸಭೆಯಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, ಕಾಂಗ್ರೆಸ್ ರ‍್ಯಾಲಿಯಲ್ಲಿ ಕೇಳಿಬಂದ ಘೋಷಣೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಚಿಂತನೆ ಮತ್ತು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಪ್ರಧಾನಿಯ ವಿರುದ್ಧ ಈ ರೀತಿಯ ಮಾತುಗಳನ್ನು ಆಡುವುದು ಮತ್ತು ಅವರ ಸಾವನ್ನು ಬಯಸುವ ಮನೋಭಾವ ಅತ್ಯಂತ ಖಂಡನೀಯ ಎಂದು ಹೇಳಿದರು. ಕಾಂಗ್ರೆಸ್ ರಾಜಕೀಯದ ಮಟ್ಟವನ್ನು ಕೆಳಮಟ್ಟಕ್ಕೆ ಇಳಿಸಿರುವುದಕ್ಕೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

