ಆನೇಕಲ್, ಡಿಸೆಂಬರ್ 15: ಬಂದಿಖಾನೆ ಡಿಜಿಪಿಯಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಅವರು ಭೇಟಿ ನೀಡಿದರು. ಜೈಲಿನ ಚೆಕ್‌ಪೋಸ್ಟ್ ಬಳಿ ಸಿಬ್ಬಂದಿಯಿಂದ ಮಾಹಿತಿ ಪಡೆದ ಡಿಜಿಪಿ, ಅಧಿಕಾರಿಗಳೊಂದಿಗೆ ಸೆಂಟ್ರಲ್ ಜೈಲಿನ ಸುತ್ತಮುತ್ತ ಪರಿಶೀಲನೆ ನಡೆಸಿದರು. ಪ್ರತಿ ಬ್ಯಾರಕ್‌ಗೂ ಭೇಟಿ ನೀಡಿ ಕೈದಿಗಳಿಂದ ನೇರವಾಗಿ ಮಾಹಿತಿ ಕಲೆಹಾಕಿದರು.
ಜೈಲಿನ ಬ್ಯಾರಕ್‌ಗಳನ್ನು ವೀಕ್ಷಿಸಿದ ಅಲೋಕ್ ಕುಮಾರ್ ಅವರು ಕೈದಿಗಳೊಂದಿಗೆ ಸಂವಾದ ನಡೆಸಿ, ಊಟ, ತಿಂಡಿ ಹಾಗೂ ಶೌಚಾಲಯ ವ್ಯವಸ್ಥೆಗಳ ಕುರಿತು ಪ್ರಶ್ನಿಸಿದರು. ಜೈಲಿನೊಳಗೆ ಮೊಬೈಲ್ ಬಳಕೆ ಕಂಡುಬಂದಲ್ಲಿ ಸಿಬ್ಬಂದಿ ತಕ್ಷಣ ವಶಕ್ಕೆ ಪಡೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಗಾಂಜಾ, ಬೀಡಿ–ಸಿಗರೇಟ್‌ಗಳಿಗೆ ಇನ್ನು ಮುಂದೆ ಅವಕಾಶ ಇಲ್ಲ, ಎಲ್ಲವೂ ಸಂಪೂರ್ಣವಾಗಿ ನಿಷೇಧವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಿಂಚಿನ ಸಂಚಾರ ನಡೆಸಿದ ಡಿಜಿಪಿ, ಅಡುಗೆಮನೆ ಹಾಗೂ ಜೈಲು ಆಸ್ಪತ್ರೆಯನ್ನೂ ವೀಕ್ಷಿಸಿದರು. ವೈದ್ಯರು ಚಿಕಿತ್ಸೆ ನೀಡುವುದರಲ್ಲೇ ಸೀಮಿತರಾಗಬೇಕು, ಮೊಬೈಲ್ ಅಥವಾ ಗಾಂಜಾ ಸಾಗಣೆ ನಡೆದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು. ಅಡುಗೆಮನೆಯ ಸಿಬ್ಬಂದಿಗೂ ಅನಗತ್ಯ ಹೆಚ್ಚುವರಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಜೈಲಿನ ಬೇಕರಿಗೆ ಭೇಟಿ ನೀಡಿದ ಸಂದರ್ಭ ಯೀಸ್ಟ್ ಬಳಸಿ ವೈನ್ ತಯಾರಿಸಿದರೆ ಗಂಭೀರ ಪರಿಣಾಮ ಎದುರಾಗುತ್ತದೆ ಎಂದು ಗರಂ ಆದ ಪ್ರಸಂಗವೂ ನಡೆಯಿತು.
ಇದೇ ವೇಳೆ ಜೈಲಿನ ಪಾರ್ಕಿಂಗ್ ಅವ್ಯವಸ್ಥೆ ಕುರಿತು ಪೊಲೀಸ್ ಸಿಬ್ಬಂದಿಯನ್ನು ಡಿಜಿಪಿ ತರಾಟೆಗೆ ತೆಗೆದುಕೊಂಡರು. ಸಾಕಷ್ಟು ಜಾಗ ಇದ್ದರೂ ಸಮರ್ಪಕ ಬಳಕೆ ಯಾಕೆ ಮಾಡಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸ್ಥಳವನ್ನು ಸ್ವಚ್ಛಗೊಳಿಸಿ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದರು. ಸುಮಾರು 50ಕ್ಕೂ ಅಧಿಕ ಅಧಿಕಾರಿಗಳೊಂದಿಗೆ ಜೈಲು ರೌಂಡ್ಸ್ ನಡೆಸಿದ ಡಿಜಿಪಿ ಅಲೋಕ್ ಕುಮಾರ್ ಅವರೊಂದಿಗೆ ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷಕ ಅಂಶುಕುಮಾರ್, ಕಮಾಂಡರ್ ವೀರೇಶ್ ಕುಮಾರ್, ಸಹಾಯಕ ಕಮಾಂಡರ್ ಮಾದೇಶ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

