ಕೊಲಂಬೋ: ಶ್ರೀಲಂಕಾದಲ್ಲಿ ಇತ್ತೀಚೆಗೆ ಸಂಭವಿಸಿದ ದಿತ್ವಾ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ನೆರವು ನೀಡುವ ಉದ್ದೇಶದಿಂದ ಭಾರತ ಸರ್ಕಾರವು 450 ಮಿಲಿಯನ್ ಡಾಲರ್ ಮೊತ್ತದ ವಿಶೇಷ ನೆರವು ಪ್ಯಾಕೇಜ್ ಅನ್ನು ಘೋಷಿಸಿದೆ. ಕೊಲಂಬೊದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇಂದು ಈ ಮಹತ್ವದ ಘೋಷಣೆಯನ್ನು ಮಾಡಿದರು.
ಚಂಡಮಾರುತ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣ ಮತ್ತು ಮೂಲಸೌಕರ್ಯ ಪುನಃಸ್ಥಾಪನೆಗೆ ಉದ್ದೇಶಿಸಿರುವ ಈ ಪ್ಯಾಕೇಜ್‌ನಲ್ಲಿ 350 ಮಿಲಿಯನ್ ಡಾಲರ್ ರಿಯಾಯಿತಿ ಸಾಲ ಹಾಗೂ 100 ಮಿಲಿಯನ್ ಡಾಲರ್ ಅನುದಾನವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಭಾರತದ ನೆರವು ರಸ್ತೆ, ರೈಲು ಮಾರ್ಗಗಳು ಮತ್ತು ಸೇತುವೆಗಳ ಪುನರ್ವಸತಿ, ಸಂಪೂರ್ಣವಾಗಿ ನಾಶವಾದ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಸೇರಿದಂತೆ ಚಂಡಮಾರುತದಿಂದ ತೀವ್ರವಾಗಿ ಹಾನಿಗೊಳಗಾದ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರಲಿದೆ.
ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆಯನ್ನು ಭೇಟಿಯಾಗಿ, ಚಂಡಮಾರುತದಿಂದ ಉಂಟಾದ ಹಾನಿ ಕುರಿತು ವಿವರವಾಗಿ ಚರ್ಚಿಸಿದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪತ್ರವನ್ನು ಅಧ್ಯಕ್ಷರಿಗೆ ಹಸ್ತಾಂತರಿಸಿದರು.
“ನೆರೆಹೊರೆಯವರು ಮೊದಲು” ಹಾಗೂ “ಸಾಗರ್” ನೀತಿಗೆ ಅನುಗುಣವಾಗಿ, ಶ್ರೀಲಂಕಾ ಚಂಡಮಾರುತದಿಂದ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಸಮಯದಲ್ಲಿಯೂ ಹಾಗೂ ಆರ್ಥಿಕ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿಯೂ ಭಾರತ ತಕ್ಷಣ ನೆರವಿಗೆ ಮುಂದಾಗಿದೆ ಎಂದು ಜೈಶಂಕರ್ ಹೇಳಿದರು.
ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಭಾರತವು ಈಗಾಗಲೇ ಸುಮಾರು 1,100 ಟನ್ ಪರಿಹಾರ ಸಾಮಗ್ರಿಗಳು ಮತ್ತು 14.5 ಟನ್‌ಗಿಂತ ಹೆಚ್ಚು ಔಷಧಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಶ್ರೀಲಂಕಾಗೆ ರವಾನಿಸಿದೆ.
ಇದೇ ವೇಳೆ, ಶ್ರೀಲಂಕಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದನ್ನು ಭಾರತ ಮುಂದುವರಿಸುವುದಾಗಿ ಜೈಶಂಕರ್ ತಿಳಿಸಿದ್ದು, ಇದರಿಂದ ಆ ದೇಶಕ್ಕೆ ವಿದೇಶಿ ನೇರ ಹೂಡಿಕೆ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದರು.
ಇದಕ್ಕೂ ಮುನ್ನ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಕೊಲಂಬೊದಲ್ಲಿ ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಅವರನ್ನು ಭೇಟಿಯಾಗಿ, ದಿತ್ವಾ ಚಂಡಮಾರುತದ ನಂತರ ಶ್ರೀಲಂಕಾದ ಪುನರ್ನಿರ್ಮಾಣಕ್ಕೆ ಭಾರತ ತನ್ನ ದೃಢ ಬದ್ಧತೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

