ತೆಹ್ರಾನ್, ಡಿಸೆಂಬರ್ 31: ಇರಾನ್ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ದೇಶವು ದಿವಾಳಿಯತ್ತ ಸಾಗುತ್ತಿರುವ ಭೀತಿಕರ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಹೇರಿರುವ ಕಠಿಣ ಆರ್ಥಿಕ ನಿರ್ಬಂಧಗಳ ಪರಿಣಾಮ ಇರಾನ್‌ನ ಕರೆನ್ಸಿ ರಿಯಾಲ್ ಅಮೆರಿಕನ್ ಡಾಲರ್ ಎದುರು ದಾಖಲೆಯ ಮಟ್ಟಕ್ಕೆ ಕುಸಿದಿದ್ದು, ಜನಸಾಮಾನ್ಯರ ಜೀವನ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆ ಇರಾನ್‌ನ ವಿವಿಧ ಭಾಗಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ಮತ್ತು ಮುಷ್ಕರಗಳನ್ನು ಆರಂಭಿಸಿದ್ದಾರೆ. ಡಿಸೆಂಬರ್ 28ರಂದು ಸಣ್ಣ ಮಟ್ಟದಲ್ಲಿ ಆರಂಭಗೊಂಡ ಜನರ ಆಕ್ರೋಶ ಇದೀಗ ಜ್ವಾಲಾಗ್ನಿಯಂತೆ ವ್ಯಾಪಿಸಿ, ಮೂರನೇ ದಿನಕ್ಕೂ ಕಾಲಿಟ್ಟಿದೆ. ರಾಜಧಾನಿ ತೆಹ್ರಾನ್‌ನ ಪ್ರಸಿದ್ಧ ಗ್ರ್ಯಾಂಡ್ ಬಜಾರ್‌ನಲ್ಲಿ ಮೊದಲು ಅಂಗಡಿ ಮಾಲೀಕರು ಮುಷ್ಕರಕ್ಕೆ ಇಳಿದಿದ್ದು, ಇದರ ಬೆನ್ನಲ್ಲೇ ಪ್ರತಿಭಟನೆಗಳು ಇಡೀ ದೇಶಕ್ಕೆ ವಿಸ್ತರಿಸಿವೆ.
ಈ ಸಣ್ಣ ಬೆಂಕಿಕಿಡಿ ಕರಾಜ್, ಹಮೆದಾನ್, ಕೇಶ್ಮ್, ಮಲಾರ್ಡ್, ಇಸ್ಫಹಾನ್, ಕರ್ಮನ್‌ಶಾ, ಶಿರಾಜ್ ಹಾಗೂ ಯಜ್ದ್ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಹರಡಿದ್ದು, ಇರಾನ್ ಸಂಪೂರ್ಣವಾಗಿ ಪ್ರತಿಭಟನೆಯ ಅಲೆಯಲ್ಲಿದೆ.
ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ದಿನೇ ದಿನೇ ಗಂಭೀರವಾಗುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಜನರ ಅಸಮಾಧಾನ ಇರಾನ್ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

