ಅಥಣಿ / ಬೆಳಗಾವಿ : ಬೆಳಗಾವಿ ಜಿಲ್ಲಾಧಿಕಾರಿಗಳ ಪರವಾಗಿ ರಕ್ಷಣಾ ವೇದಿಕೆ ಹಾಗೂ ಕನ್ನಡ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಅಥಣಿ ಪಟ್ಟಣದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಗಿಳಿದು, ಎಂಇಎಸ್ ಹಾಗೂ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ಮಹಾಮೇಳಾವ ಆಚರಣೆಗೆ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ, ಇದನ್ನು ಪ್ರಶ್ನಿಸಿ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಅವರು ಲೋಕಸಭಾ ಸ್ಪೀಕರ್‌ಗೆ ಜಿಲ್ಲಾಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಕ್ರಮವನ್ನು ಖಂಡಿಸಿರುವ ಕರವೇ, ಸಂಸದರು ಜಿಲ್ಲಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆಗೆ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸಿದೆ.
ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳು ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದಲೇ ನಿರ್ಧಾರ ಕೈಗೊಂಡಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ಕ್ರಮ ಕೈಗೊಳ್ಳುವುದು ಅನ್ಯಾಯಕರ ಎಂದು ಹೇಳಿದರು. ಜಿಲ್ಲಾಧಿಕಾರಿಗಳ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರವೇಶಿಸಿ ಮನವರಿಕೆ ಮಾಡುವಂತೆ ರಾಜ್ಯದ ಎಲ್ಲಾ ಸಂಸದರಿಗೆ ಕರವೇ ಮನವಿ ಸಲ್ಲಿಸಿದೆ.
ಇದೇ ವೇಳೆ ಅಥಣಿ ತಹಶಿಲ್ದಾರರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಸದ ಧೈರ್ಯಶೀಲ ಮಾನೆ ನೀಡಿರುವ ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಅಂಗೀಕರಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಕರವೇ ಒತ್ತಾಯಿಸಿದೆ. ಪ್ರತಿಭಟನೆ ವೇಳೆ ಜಿಲ್ಲಾಡಳಿತದ ವಿರುದ್ಧ ನಡೆಯುತ್ತಿರುವ ಅನಗತ್ಯ ರಾಜಕೀಯ ಹಸ್ತಕ್ಷೇಪವನ್ನು ತಕ್ಷಣ ನಿಲ್ಲಿಸಬೇಕು ಎಂದು ಘೋಷಣೆಗಳು ಮೊಳಗಿದವು.
ವರದಿ : ಸೂರಜ ಕೋರೆ, ಚಿಕ್ಕೋಡಿ ವರದಿಗಾರರು

