ನವದೆಹಲಿ: ಆರ್ಥಿಕ ವಹಿವಾಟಿಗೆ ಬಳಕೆಯಾಗುವ ಶಾಶ್ವತ ಖಾತೆ ಸಂಖ್ಯೆ (ಪಾನ್) ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಡಿಸೆಂಬರ್ 31ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಇದ್ದರೆ ತೆರಿಗೆದಾರರು ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್–ಪಾನ್ ಲಿಂಕ್ ಮಾಡಲು ನೀಡಿದ್ದ ಕೊನೆಯ ಗಡುವು ಇನ್ನು ಕೆಲವೇ ಗಂಟೆಗಳಲ್ಲಿ ಮುಗಿಯಲಿದ್ದು, ಇಂದು ಕೊನೆಯ ದಿನವಾಗಿದೆ.
ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ, ನಾಳೆಯಿಂದ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಇದರಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ, ಬ್ಯಾಂಕ್ ವಹಿವಾಟು, ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳು ಸೇರಿದಂತೆ ಹಲವು ತೆರಿಗೆ ಸಂಬಂಧಿತ ಕಾರ್ಯಗಳಲ್ಲಿ ತೊಂದರೆ ಉಂಟಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವ ಮುಖ್ಯ ಉದ್ದೇಶ ವ್ಯಕ್ತಿಯ ಗುರುತನ್ನು ದೃಢೀಕರಿಸುವುದು ಹಾಗೂ ನಕಲಿ ಪಾನ್ ಕಾರ್ಡ್ ಬಳಕೆಯನ್ನು ತಡೆಯುವುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಪ್ರಕಾರ, ನಿಗದಿತ ನಮೂನೆ ಹಾಗೂ ವಿಧಾನದಲ್ಲಿ ಗಡುವಿನೊಳಗೆ ಆಧಾರ್–ಪಾನ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ.
ಹೊಸ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ಈ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ಮಾಡುವ ಅಗತ್ಯವಿಲ್ಲ. ಹೊಸ ಪಾನ್ ಕಾರ್ಡ್ ನೀಡುವಾಗಲೇ ಆಧಾರ್ ಲಿಂಕ್ ಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯುತ್ತದೆ ಎಂದು ತಿಳಿಸಲಾಗಿದೆ.
ಲಿಂಕ್ ಮಾಡಲು ಅಗತ್ಯವಿರುವ ದಾಖಲೆಗಳು:
ಮಾನ್ಯವಾದ ಪಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಗತ್ಯವಾಗುತ್ತದೆ. ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.

