ಬೆಂಗಳೂರು, ಜನವರಿ 07: ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಹಳ್ಳಿಯಲ್ಲಿ ಆರು ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ. ತಾಯಿಯ ಮೇಲಿನ ದ್ವೇಷದಿಂದಲೇ ಮಗಳನ್ನು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕೋಲ್ಕತ್ತಾ ಮೂಲದ ಆರು ವರ್ಷದ ಬಾಲಕಿ ಶಹಜಾನ್ ಕತೂನ್ ಅವರ ಹತ್ಯೆ ನಗರವನ್ನೇ ಬೆಚ್ಚಿಬೀಳಿಸಿದೆ. ಬಾಲಕಿಯ ತಂದೆ ಇಂಜಮುಲ್ ಶೇಖ್ ಲೇಬರ್ ಕೆಲಸ ಮಾಡುತ್ತಿದ್ದು, ತಮ್ಮ ಮಗಳು ಒಂದು ದಿನದಿಂದ ಕಾಣೆಯಾಗಿರುವುದಾಗಿ ನಿನ್ನೆ (ಜ.6) ಮಧ್ಯಾಹ್ನ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿ ಪರಿಶೀಲನೆ ನಡೆಸಿದಾಗ, ಬಾಲಕಿ ಪರಿಚಿತ ವ್ಯಕ್ತಿಯೊಂದಿಗೆ ತೆರಳಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಲ್ಲೂರಹಳ್ಳಿ ಪ್ರದೇಶದಲ್ಲಿ ಪೊಲೀಸರು ಮಧ್ಯರಾತ್ರಿ ತನಕ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.
ಮಧ್ಯರಾತ್ರಿ ದೇವಸ್ಥಾನ ರಸ್ತೆಯ ಮೋರಿಯೊಂದರಲ್ಲಿ ಬ್ಯಾಗ್‌ನೊಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪ್ಲಾಸ್ಟಿಕ್ ವೈರ್ ಬಳಸಿ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ತಿಳಿದುಬಂದಿದೆ.
ಮೃತದೇಹದ ಮೇಲೆ ಯಾವುದೇ ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯದ ಗುರುತುಗಳು ಪತ್ತೆಯಾಗಿಲ್ಲ ಎಂದು ವೈಟ್‌ಫೀಲ್ಡ್ ಡಿಸಿಪಿ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಪ್ರಕಾರ, ಆರೋಪಿಯ ಕುಟುಂಬ ಹಾಗೂ ಬಾಲಕಿಯ ಕುಟುಂಬದ ನಡುವೆ ಹಿಂದಿನಿಂದಲೂ ವೈಷಮ್ಯ ಇದ್ದು, ತಾಯಿ ಮೇಲಿನ ದ್ವೇಷದಿಂದಲೇ ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಆರೋಪಿ ಯಾರು ಎಂಬುದು ಪೊಲೀಸರಿಗೆ ತಿಳಿದಿದ್ದು, ವಿಶೇಷ ತಂಡವನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.

