ಮೈಸೂರು, ಜನವರಿ 15: ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ನಾಯಕರು ಈಗಿನಿಂದಲೇ ಟಿಕೆಟ್‌ಗಾಗಿ ತಮ್ಮ ತಮ್ಮ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಈ ನಡುವೆಯೇ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಇತ್ತೀಚೆಗೆ ಹೇಳಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ತಾನು ಟಿಕೆಟ್ ಆಕಾಂಕ್ಷಿಯಾಗಿರುವ ಕ್ಷೇತ್ರವನ್ನು ಘೋಷಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ವಿಧಾನಸಭಾ ಚುನಾವಣೆಗೆ ನಾನು ಮೈಸೂರಿನ ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ” ಎಂದು ಸ್ಪಷ್ಟಪಡಿಸಿದರು. ಅಭ್ಯರ್ಥಿಗೂ ಆಕಾಂಕ್ಷಿಗೂ ವ್ಯತ್ಯಾಸವಿದೆ. ನಾನು ಟಿಕೆಟ್ ಆಕಾಂಕ್ಷಿ ಮಾತ್ರ. ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, “ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ. ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನು. ಇಲ್ಲಿನ ಜನರು ವಿದ್ಯಾವಂತರಷ್ಟೇ ಅಲ್ಲ, ಪ್ರಜ್ಞಾವಂತರೂ ಹೌದು. ಚಾಮರಾಜ ಕ್ಷೇತ್ರವನ್ನು ಸದಾ ವಿದ್ಯಾವಂತರ ಕ್ಷೇತ್ರವೆಂದು ಕರೆಯಲಾಗುತ್ತದೆ. ಸಮಾಜದ ಬಗ್ಗೆ ಯೋಚಿಸುವ ಜನರು ಇಲ್ಲಿ ಹೆಚ್ಚಿದ್ದಾರೆ” ಎಂದರು.
“ಈ ಕ್ಷೇತ್ರದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿದ್ಯಾಕೇಂದ್ರಗಳಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಉದ್ದಿಮೆಗಳು ಇಲ್ಲಿ ಅನುಷ್ಠಾನದಲ್ಲಿವೆ. ವಿದ್ಯಾವಂತರು, ಪ್ರಜ್ಞಾವಂತರು ಮತ್ತು ವಿಚಾರವಂತರ ಪ್ರತಿನಿಧಿ ಯಾರಾಗಬೇಕು ಎಂಬುದನ್ನು ಇಲ್ಲಿನ ಜನರು ತೀರ್ಮಾನಿಸುತ್ತಾರೆ. ನನಗೂ ಆಶೀರ್ವಾದ ನೀಡಿ” ಎಂದು ಪ್ರತಾಪ್ ಸಿಂಹ ಚಾಮರಾಜ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.

