ಮೈಸೂರು, ಜನವರಿ 31: ಮೈಸೂರಿನಲ್ಲಿ ಮತ್ತೆ ಸುಮಾರು 10 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಬ್ಬಾಳದಲ್ಲಿ ಎನ್‌ಸಿಬಿ (NCB) ದಾಳಿ ನಡೆಸಿದ್ದು, ಗೃಹ ಸಚಿವರು ಹಾಗೂ ಪೊಲೀಸ್ ಕಮಿಷನರ್‌ಗಳು “ಏನೂ ಸಿಕ್ಕಿಲ್ಲ” ಎಂದು ಹೇಳಿದ್ದರೆ, ಎನ್‌ಸಿಬಿ ಮಾತ್ರ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ಹಾಗೂ ಮಾದಕ ವಸ್ತುಗಳು ಪತ್ತೆಯಾಗಿದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. “ಎನ್‌ಸಿಬಿಗೆ ನಾವು ಕೃತಜ್ಞತೆ ಸಲ್ಲಿಸಬೇಕು. ಇಲ್ಲದಿದ್ದರೆ ಮೈಸೂರಿನಲ್ಲಿ ಡ್ರಗ್ಸ್ ಜಾಲ ಇರುವುದು ಗೊತ್ತಾಗುತ್ತಿರಲಿಲ್ಲ. ಡ್ರಗ್ಸ್ ಸಿಂಡಿಕೇಟ್ ಉತ್ಪಾದನಾ ಕೇಂದ್ರವನ್ನೇ ಎನ್‌ಸಿಬಿ ರೇಡ್ ಮಾಡಿದೆ,” ಎಂದು ಯದುವೀರ್ ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ
ಡೆಲ್ಲಿ, ಮಹಾರಾಷ್ಟ್ರ ಪೊಲೀಸರೇ ಬಂದು ಮೈಸೂರಿನಲ್ಲಿ ಡ್ರಗ್ಸ್ ಪತ್ತೆ ಮಾಡುತ್ತಿದ್ದಾರೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎನ್ನುವುದಕ್ಕೆ ಸಾಕ್ಷಿ. “ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ?” ಎಂಬ ಅನುಮಾನ ಮೂಡುತ್ತಿದೆ. ಡ್ರಗ್ಸ್ ವಿಚಾರದಲ್ಲಿ ಮೈಸೂರಿನ ಹೆಸರು ಪದೇಪದೇ ಕೇಳಿಬರುತ್ತಿದೆ. ಯಾವುದೇ ಡ್ರಗ್ಸ್ ಸಿಕ್ಕಿಲ್ಲ ಎಂದು ಪೊಲೀಸರು ಹಾಗೂ ಗೃಹ ಸಚಿವರು ಹೇಳಿರುವುದು ಖಂಡನೀಯ. “ಪೊಲೀಸರು ಕೂಡ ಶಾಮೀಲಾಗಿದಾರಾ?” ಎಂಬ ಅನುಮಾನ ಸಹಜವಾಗಿ ಮೂಡುತ್ತದೆ ಎಂದು ಅವರು ಕಿಡಿಕಾರಿದರು.
ಸತ್ಯ ಮುಚ್ಚಿಡಲು ಯತ್ನ?
ಪೊಲೀಸರು ಮತ್ತು ಗೃಹ ಸಚಿವರು “ಏನೂ ಸಿಕ್ಕಿಲ್ಲ” ಎಂದಿದ್ದರೆ, ವಾಸ್ತವದಲ್ಲಿ ರಾಸಾಯನಿಕ ವಸ್ತುಗಳೊಂದಿಗೆ ಭಾರೀ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. “ಸತ್ಯವನ್ನು ಮುಚ್ಚಿಡಲು ಯತ್ನವಾಯಿತೇ?” ಎಂಬ ಪ್ರಶ್ನೆ ಜನಮನದಲ್ಲಿ ಮೂಡುತ್ತದೆ. ಇದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನೇ ತೋರಿಸುತ್ತದೆ ಎಂದು ಸಂಸದ ಯದುವೀರ್ ಬೇಸರ ವ್ಯಕ್ತಪಡಿಸಿದರು.
ಸ್ಪೆಷಲ್ ಟೀಮ್ ರಚಿಸಿ — ಡ್ರಗ್ಸ್ ಮುಕ್ತ ರಾಜ್ಯಕ್ಕೆ ಆಗ್ರಹ
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಸ್ಪೆಷಲ್ ಟೀಮ್ ರಚಿಸಿ ಡ್ರಗ್ಸ್ ಮುಕ್ತ ರಾಜ್ಯ ಮಾಡುವತ್ತ ಗಂಭೀರ ಕ್ರಮ ಕೈಗೊಳ್ಳಬೇಕು. ಮೈಸೂರಿನಲ್ಲಿ ಮಾತ್ರವಲ್ಲದೆ ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ಹಲವು ಕಡೆ ರೇಪ್ ಮತ್ತು ಮರ್ಡರ್ ಪ್ರಕರಣಗಳಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
“ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದನ್ನು ಜನತೆಗೆ ಹೇಳಬೇಕು. ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದಿರುವ ಅವರ ಆಡಳಿತಕ್ಕೆ, ಡ್ರಗ್ಸ್ ಹಾಗೂ ಅಪರಾಧ ಪ್ರಕರಣಗಳೂ ಸೇರಬಾರದು,” ಎಂದು ಯದುವೀರ್ ಒಡೆಯರ್ ಎಚ್ಚರಿಕೆ ನೀಡಿದರು.
ಇದೇ ವೇಳೆ, ಡ್ರಗ್ಸ್ ವಿಷಯವಾಗಿ ಕೇಂದ್ರ ಗೃಹ ಸಚಿವರೊಂದಿಗೆ ಮತ್ತೊಮ್ಮೆ ಚರ್ಚಿಸುವುದಾಗಿ ಅವರು ತಿಳಿಸಿದರು.

