ಬೆಂಗಳೂರು: ಸತತ 18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ 11 ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ನೂಕುನುಗ್ಗಲಿನಿಂದ ಸಾವನ್ನಪ್ಪಿದ್ದಾರೆ. ಟ್ರೋಫಿ ಗೆದ್ದ ತಂಡವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕ, ಯುವತಿಯರು ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ವೇಳೆ ಉಂಟಾದ ತಳ್ಳಾಟ, ನೂಕುನುಗ್ಗಲಿನಿಂದ ಹಲವಾರು ಮಂದಿ ಅಸ್ವಸ್ಥಗೊಂಡಿದ್ದಾರೆ.
18, 19, ಮತ್ತು 20ನೇ ಗೇಟ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಏಕಾಏಕಿ ಒಳನುಗ್ಗಿದ್ದು, ತಳ್ಳಾಟ, ನೂಕುನುಗ್ಗಲು ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಆರ್ ಸಿಬಿ ಆಟಗಾರರು ಆಗಮಿಸುವ ಗೇಟ್ ನಂಬರ್ 12 ರ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದ ವೇಳೆ ಭಾರಿ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಯಿತು.
ಈ ದುರಂತಕ್ಕೆ ಯಾರು ಹೊಣೆ.. ?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆಯನ್ನು ಆಯೋಜಿಸಿದ್ದು ಸರ್ಕಾರವೇ. ಫ್ರಾಂಚೈಸಿಗೆ ತಿಳಿಸಿ ಈ ಕಾರ್ಯಕ್ರಮ ನಡೆಸಲಾಯಿತಾ ಗೊತ್ತಿಲ್ಲ. ಆರ್‌ಸಿಬಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ ಎಂದು ಸರ್ಕಾರಕ್ಕೆ ಗೊತ್ತಾಗಲಿಲ್ಲವಾ? ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳದೇ ಕಾರ್ಯಕ್ರಮ ಆಯೋಜಿಸಿದ್ದು ಎದ್ದು ಕಾಣುತ್ತದೆ.

