ಬೆಂಗಳೂರು: ಮನರೇಗಾ (MGNREGA) ಯೋಜನೆಯನ್ನು ಮರುಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ. ಈ ವಿಚಾರ ವಿಧಾನಸಭೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದೆ.
ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಭಾಂಗಣದಲ್ಲಿ ಗದ್ದಲ ಉಂಟಾಗಿದ್ದು, ವಿಪಕ್ಷ ಸದಸ್ಯರ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚರ್ಚೆಯ ಮಧ್ಯೆ ಸಿಎಂ ಸಿದ್ದರಾಮಯ್ಯ ಆಕ್ರೋಶಗೊಂಡು, “ಏಯ್, ನೀವು ಎದ್ದೇಳ್ರಿ… ಗಲಾಟೆ ಮಾಡ್ರಿ” ಎಂದು ಹೇಳಿದ ಘಟನೆ ಸಭೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಆರ್. ಅಶೋಕ್, “ಮನರೇಗಾ ಯೋಜನೆಗೆ ಕೇಂದ್ರದಿಂದ ಹಣ ತರಲು ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲ” ಎಂದು ಟೀಕಿಸಿದರು.
ಅಶೋಕ್ ಅವರ ಹೇಳಿಕೆಗೆ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿ, “ನಿಮಗಿಂತ ಜಾಸ್ತಿ ಜನ ನಮ್ಮ ಬಳಿ ಇದ್ದಾರೆ… ಹುಷಾರ್” ಎಂದು ತಿರುಗೇಟು ನೀಡಿದರು. ಈ ಘಟನೆಯಿಂದ ವಿಧಾನಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಗಿ, ಸಭೆಯನ್ನು ನಡೆಸಲು ಸ್ಪೀಕರ್ ಮಧ್ಯಸ್ಥಿಕೆವಹಿಸಬೇಕಾಯಿತು.
ಮನರೇಗಾ ಯೋಜನೆ ಮರುಸ್ಥಾಪನೆ ವಿಷಯ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

