ನವದೆಹಲಿ: ದಿತ್ವಾ ಚಂಡಮಾರುತದಿಂದ ಉಂಟಾದ ಭಾರೀ ಮಳೆ, ಪ್ರವಾಹ ಮತ್ತು ದುರಂತ ಪರಿಸ್ಥಿತಿಯಿಂದ ತತ್ತರಿಸಿರುವ ಶ್ರೀಲಂಕಾಗೆ ಭಾರತವು ತುರ್ತು ನೆರವನ್ನು ಕಳಿಸಿದೆ. ‘ಆಪರೇಷನ್ ಸಾಗರ್ ಬಂಧು’ನಡಿ, ಭಾರತೀಯ ವಾಯುಪಡೆ ಶನಿವಾರ 21 ಟನ್ ಪರಿಹಾರ ಸಾಮಗ್ರಿ, 80 ಕ್ಕೂ ಹೆಚ್ಚು NDRF ಸಿಬ್ಬಂದಿ ಹಾಗೂ ಎಂಟು ಟನ್ ತುರ್ತು ಉಪಕರಣಗಳನ್ನು ವಿಶೇಷ ವಿಮಾನಗಳ ಮೂಲಕ ಸಾಗಿಸಿದೆ.
IAF ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿರುವಂತೆ, “ದಿತ್ವಾ ಚಂಡಮಾರುತದಿಂದಾದ ಮಾರಕ ಹಾನಿಯ ನಂತರ, ಶ್ರೀಲಂಕಾದ ಪರಿಹಾರ ಕಾರ್ಯಾಚರಣೆಯನ್ನು ಬಲಪಡಿಸಲು ಭಾರತವು ಆಪರೇಷನ್ ಸಾಗರ್ ಬಂಧುವನ್ನು ತಕ್ಷಣ ಪ್ರಾರಂಭಿಸಿದೆ,” ಎಂದು ತಿಳಿಸಿದೆ.
ಹಿಂಡನ್ ವಾಯುನೆಲೆಯಿಂದ ಶುಕ್ರವಾರ ತಡರಾತ್ರಿ ಹಾರಾಟ ಆರಂಭಿಸಿದ C-130 ಮತ್ತು IL-76 ವಿಮಾನಗಳು 21 ಟನ್ ಅಗತ್ಯ ಪಡಿತರ, ನೈರ್ಮಲ್ಯ ಕಿಟ್‌ಗಳು, ವೈದ್ಯಕೀಯ ಹಾಗೂ ತುರ್ತು ಉಪಕರಣಗಳನ್ನು ಹೊತ್ತೊಯ್ದವು. C-130 ವಿಮಾನವು ಬೆಳಗಿನ ಜಾವ 1:30ರ ಸುಮಾರಿಗೆ ಕೊಲಂಬೊ ಬಂಡರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಳಿದಿದ್ದು, ಅಲ್ಲಿ ಭಾರತೀಯ ಹೈಕಮಿಷನ್ ಹಾಗೂ ಶ್ರೀಲಂಕಾ ವಾಯುಪಡೆಯ ಅಧಿಕಾರಿಗಳು ಸಾಮಗ್ರಿಗಳನ್ನು ಸ್ವೀಕರಿಸಿದರು.
ಶ್ರೀಲಂಕೆಗೆ ನೀಡಿದ ಈ ನೆರವು “ನೆರೆಹೊರೆ ಮೊದಲು” ನೀತಿಗೆ ಭಾರತದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತದೆ ಎಂದು ವಾಯುಪಡೆ ತಿಳಿಸಿದೆ. “ಈ ಸಂಕಷ್ಟದ ಸಂದರ್ಭದಲ್ಲಿ ಭಾರತ ಶ್ರೀಲಂಕಾದೊಂದಿಗೆ ದೃಢವಾಗಿ ನಿಂತಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಭಾರತೀಯ ನೌಕಾಪಡೆಯ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ಉದಯಗಿರಿಯಿಂದ ಮೊದಲ ಕಂತಿನ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದ್ದು, ಇದುವರೆಗಿನ ಸಹಾಯ ಕಾರ್ಯಾಚರಣೆ ಆಪರೇಷನ್ ಸಾಗರ್ ಬಂಧುವಿನ ಪ್ರಮುಖ ಹಂತವಾಗಿದೆ.

