ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಹನುಮಂತಪುರ ಗೇಟ್ ಬಳಿ ಇಂದು ಮುಂಜಾನೆ ಖಾಸಗಿ ಬಸ್ಸೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಸಂಜನಾ ಟ್ರಾವಲ್ಸ್ ಸ್ಲೀಪರ್ ಕೋಚ್ ಬಸ್ ಸುಮಾರು 3 ಗಂಟೆ ವೇಳೆಗೆ ಅಪಘಾತಕ್ಕೀಡಾಗಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಹಳ್ಳಕ್ಕೆ ಇಳಿದು ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 40 ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಕೆಳಗಿಳಿದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಬಸ್ ಹೊತ್ತಿ ಉರಿದ ದೃಶ್ಯ ಭಯಾನಕವಾಗಿದ್ದು, ಲಗೇಜ್ ಬಾಕ್ಸ್‌ನಲ್ಲಿ ಇಡಲಾಗಿದ್ದ ಪ್ರಯಾಣಿಕರ ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಭಸವಾಗಿವೆ. ಮಾಹಿತಿ ತಿಳಿದ ತಕ್ಷಣ ಟೋಲ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್‌ಗಳಲ್ಲಿ ಬೆಂಕಿ ಅವಘಡಗಳು ಪದೇಪದೇ ಸಂಭವಿಸುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

