ನವದೆಹಲಿ, ಫೆ.11: ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆಯಾಗುತ್ತಿರುವ ಘಟನೆಗಳು ಸತತವಾಗಿ ವರದಿಯಾಗುತ್ತಿರುವ ಹಿನ್ನೆಲೆ, ಈ ಪ್ರಕರಣಗಳ ಹಿಂದೆ ರಾಷ್ಟ್ರವ್ಯಾಪಿ ಜಾಲ ಅಥವಾ ರಾಜ್ಯಮಟ್ಟದ ಸಂಘಟಿತ ಗುಂಪುಗಳ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಈ ಘಟನೆಗಳ ಹಿಂದೆ ಯಾವುದಾದರೂ ನಿರ್ದಿಷ್ಟ ಮಾದರಿ (ಪ್ಯಾಟರ್ನ್) ಇದೆಯೇ ಅಥವಾ ಇವು ಪ್ರತ್ಯೇಕ ಹಾಗೂ ಆಕಸ್ಮಿಕ ಪ್ರಕರಣಗಳೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ ಎಂದು ತಿಳಿಸಿತು. ದೇಶದ ಎಲ್ಲಾ ರಾಜ್ಯಗಳಿಂದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅದರ ಸಮಗ್ರ ವಿಶ್ಲೇಷಣೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕೆಲವು ರಾಜ್ಯಗಳು ಕಾಣೆಯಾದ ಮಕ್ಕಳ ಕುರಿತ ಡೇಟಾ ಹಾಗೂ ಪ್ರಕರಣಗಳ ಪ್ರಗತಿ ವರದಿಯನ್ನು ಸಲ್ಲಿಸಿವೆ. ಆದರೆ ಇನ್ನೂ ಸುಮಾರು ಒಂದು ಡಜನ್ ರಾಜ್ಯಗಳಿಂದ ಮಾಹಿತಿ ಲಭ್ಯವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದ ನಂತರ ಮಾತ್ರ ಸಮಗ್ರ ವಿಶ್ಲೇಷಣೆ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, “ಈ ಪ್ರಕರಣಗಳ ಹಿಂದೆ ದೇಶವ್ಯಾಪಿ ಜಾಲವಿದೆಯೇ ಅಥವಾ ರಾಜ್ಯ ಮಟ್ಟದಲ್ಲಿ ಮಾತ್ರ ಇವು ನಡೆಯುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ. ಒಂದು ನಿರ್ದಿಷ್ಟ ಮಾದರಿ ಇದೆಯೇ? ಪ್ರಕರಣಗಳ ನಡುವೆ ಸಂಬಂಧವಿದೆಯೇ?” ಎಂದು ಪ್ರಶ್ನಿಸಿತು.
ಅಪಹರಣದಿಂದ ರಕ್ಷಿಸಲ್ಪಟ್ಟ ಮಕ್ಕಳನ್ನು ಸರ್ಕಾರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಬೇಕು ಎಂದು ನ್ಯಾಯಾಲಯ ಸೂಚಿಸಿತು. ಇದರಿಂದ ಈ ಘಟನೆಗಳ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ಪ್ರಮುಖ ಸುಳಿವುಗಳು ದೊರಕಬಹುದು ಎಂದು ಅಭಿಪ್ರಾಯಪಟ್ಟಿತು.
ಇನ್ನೂ ಮಾಹಿತಿ ಸಲ್ಲಿಸದ ರಾಜ್ಯಗಳ ನಡೆಗೆ ಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅಗತ್ಯವಿದ್ದಲ್ಲಿ ಕಠಿಣ ಆದೇಶಗಳನ್ನು ನೀಡಲಾಗುವುದು ಎಂದು ಎಚ್ಚರಿಸಿತು. ಈ ಸಂಬಂಧ ಒಂದು ಎನ್‌ಜಿಒ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಂದ ಮಾಹಿತಿಯನ್ನು ಕೋರಲಾಗಿದೆ ಹಾಗೂ ಅಗತ್ಯ ಕ್ರಮಗಳನ್ನು ಆರಂಭಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದೆ.

