ದೊಡ್ಡಬಳ್ಳಾಪುರ, ಫೆ.19: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೊಂಗೆ ಮರದಲ್ಲಿ ನೇತಾಡುತ್ತಿದ್ದ ತಲೆಬುರುಡೆಯೊಂದು ಪತ್ತೆಯಾಗಿದ್ದು, ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್ ಸಮೀಪದಲ್ಲಿರುವ ರೆಸೋನೆಸ್ಸ್ ಲ್ಯಾಬೋರೇಟರಿಸ್ ಪ್ರೈ.ಲಿ. ಅವರ 8 ಎಕರೆ ವ್ಯಾಪ್ತಿಯ ವಿಶಾಲವಾದ ಅವರಣದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಹೊಂಗೆ ಮರದಲ್ಲಿ ಅಸ್ತಿಪಂಜರ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ತಲೆಯ ಭಾಗ ಮಾತ್ರ ಮರದಲ್ಲಿ ನೇತಾಡುತ್ತಿದ್ದರೆ, ದೇಹದ ಇತರ ಮೂಳೆಗಳು ಕೆಳಭಾಗದಲ್ಲಿ ಚದುರಿದ ಸ್ಥಿತಿಯಲ್ಲಿ ಕಂಡುಬಂದಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಹಜರ್ ನಡೆಸಿ ಪರಿಶೀಲನೆ ಕೈಗೊಂಡರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣವಾಗಿರುವ ಸಾಧ್ಯತೆ ಇದ್ದು, ಸುಮಾರು ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಘಟನೆ ಗಮನಕ್ಕೆ ಬರದ ಹಿನ್ನಲೆಯಲ್ಲಿ ಶವ ಸಂಪೂರ್ಣ ಕೊಳೆತು ಅಸ್ತಿಪಂಜರವಾಗಿರುವುದು ಕಂಡುಬಂದಿದೆ.
ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆತ ಫ್ಯಾಕ್ಟರಿ ನೌಕರನಾ ಅಥವಾ ಹೊರಗಿನ ವ್ಯಕ್ತಿಯಾ ಎಂಬುದರ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆ ನಂತರ ಪ್ರಕರಣದ ನಿಜಾಂಶ ಬಹಿರಂಗವಾಗಲಿದೆ.

