ಬೆಂಗಳೂರು, ಫೆಬ್ರವರಿ 26: ಸ್ಯಾಂಡಲ್‌ವುಡ್ ನಿರ್ದೇಶಕ ಅನೀಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಗರದ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣವು ಸಿನಿರಂಗದಲ್ಲೇ ಚರ್ಚೆಗೆ ಕಾರಣವಾಗಿದೆ.
ಅನೀಶ್ “ಜೀವನದ ಭಾಷೆ” ಚಿತ್ರದ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೂ ಮೊದಲು “ಭರವಸೆಯ ಜೀವನ” ಎಂಬ ಶಾರ್ಟ್ ಮೂವಿ ನಿರ್ಮಿಸಿ ಗಮನ ಸೆಳೆದಿದ್ದರು. ಕೆಲವು ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಂದ ಸಿನಿಮಾ ನಿಲ್ಲಿಸಿ ಬಳಿಕ ಮುಂಬೈಗೆ ಸ್ಥಳಾಂತರವಾಗಿದ್ದರು.
ಈ ನಡುವೆ ತಮ್ಮ ಕಾರನ್ನು ಮಾರಾಟ ಮಾಡುವ ಬಗ್ಗೆ “ಭೀಮ” ಸಿನಿಮಾದಲ್ಲಿ ನಟಿಸಿದ್ದ ನಟಿ ಐಶ್ವರ್ಯ ಅವರಿಗೆ ಮಾಹಿತಿ ನೀಡಿದ್ದರು. ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ಅಭಿನಯಿಸಿದ್ದರು. ಈ ಮಾಹಿತಿ ಆರೋಪಿಗಳ ಕೈಗೆ ಸೇರಿದ್ದು, ಕಾರು ಖರೀದಿಸುವ ನೆಪದಲ್ಲಿ ಅನೀಶ್ ಅವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದೆ.
ನಟಿ ಮೂಲಕ ಬೆಂಗಳೂರಿಗೆ ಕರೆಸಿಕೊಂಡ ಬಳಿಕ ಕಾರು ಖರೀದಿ ನೆಪದಲ್ಲೇ ಅನೀಶ್ ಅವರನ್ನು ಅಪಹರಿಸಲಾಗಿದೆ. ನಿರ್ದೇಶಕನೊಂದಿಗೆ ಐದು ಲಕ್ಷ ರೂಪಾಯಿ ಹಣದ ವಿಚಾರವಾಗಿ ಉಂಟಾದ ವಾಗ್ವಾದವೇ ಈ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಚಿನ್ನಾಭರಣ ದೋಚಿರುವ ವಿಚಾರವೂ ತನಿಖೆಯಲ್ಲಿ ಬಹಿರಂಗವಾಗಿದೆ.
ಸದ್ಯ 11 ಮಂದಿಯನ್ನು ಬಂಧಿಸಿರುವ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

