ಮೈಸೂರು, ಏಪ್ರಿಲ್ 14: ರಾಜ್ಯಕ್ಕೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರಿಗಾಗಿ ನಾಲ್ವಡಿ ಒಡೆಯರ್ ಶೈಲಿಯ ವಿಶೇಷ ಮೈಸೂರು ಪೇಟ ಸಿದ್ಧವಾಗಿದೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಭೈರವೈಕ್ಯ ಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಈ ಪೇಟ ಧರಿಸುವ ಮೂಲಕ ಪ್ರಧಾನಿ ಗಮನ ಸೆಳೆಯಲಿದ್ದಾರೆ.
ಮೈಸೂರಿನ ಹೆಸರಾಂತ ಕಲಾವಿದ ನಂದನ್ ಸಿಂಗ್ ಅವರು ಪ್ರಧಾನಿಗಾಗಿಯೇ ಈ ವಿಶಿಷ್ಟ ಪೇಟವನ್ನು ರೂಪಿಸಿದ್ದು, ಇದರ ತಯಾರಿಗೆ ಸುಮಾರು ಐದು ದಿನಗಳು ಹಿಡಿದಿವೆ. ಬನಾರಸ್ ಬಟ್ಟೆ ಹಾಗೂ ವಿಶೇಷ ಮೋಲ್ಡ್ ಬಳಸಿ ತಯಾರಿಸಿದ ಈ ಪೇಟವು, ಮೈಸೂರು ಅರಸರ ಕಾಲದ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಲ್ವಡಿ ಅವರು ಧರಿಸುತ್ತಿದ್ದ ಶೈಲಿಯನ್ನು ಪ್ರತಿಬಿಂಬಿಸುತ್ತದೆ.
ಪೇಟದ ಮಧ್ಯಭಾಗದಲ್ಲಿ ಮೈಸೂರು ರಾಜ್ಯದ ರಾಜಲಾಂಛನವಾದ ‘ಗಂಡಭೇರುಂಡ’ ವಿನ್ಯಾಸ ಅಳವಡಿಸಲಾಗಿದ್ದು, ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯ ಮೂಲಕ ಪ್ರಧಾನಿಗಳಿಗೆ ಅರ್ಪಿಸಲಾಗುತ್ತಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಈ ಕಲಾಕೃತಿ ಮೂಡಿಬಂದಿದೆ.
ಮೋದಿ ಮಂಡ್ಯಕ್ಕೆ ಮೂರನೇ ಭೇಟಿ
ಪ್ರಧಾನಿ ಮೋದಿ ಅವರಿದು ಮಂಡ್ಯ ಜಿಲ್ಲೆಗೆ ಮೂರನೇ ಭೇಟಿ ಆಗಿದ್ದು, ಈ ಬಾರಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಆಗಮಿಸುತ್ತಿದ್ದಾರೆ. 2004ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ವಿಧಾನಸಭೆ ಚುನಾವಣಾ ಪ್ರಚಾರಕ್ಕಾಗಿ ಮೊದಲ ಬಾರಿ ಮಂಡ್ಯಕ್ಕೆ ಭೇಟಿ ನೀಡಿದ್ದರು. ನಂತರ 2023ರ ಮಾರ್ಚ್ 12ರಂದು ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗಾಗಿ ಎರಡನೇ ಬಾರಿ ಆಗಮಿಸಿದ್ದರು.
ಭೈರವೈಕ್ಯ ಮಂದಿರ ಲೋಕಾರ್ಪಣೆ
ಆದಿಚುಂಚನಗಿರಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಮಂದಿರವು ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಿಸಲಾಗಿದೆ. ಕಾರ್ಯಕ್ರಮದ ನಂತರ ಭಕ್ತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಲಿದ್ದಾರೆ. ಆದಿಚುಂಚನಗಿರಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ.
ಭೇಟಿಯ ವೇಳಾಪಟ್ಟಿ
ನಾಳೆ ಬೆಳಿಗ್ಗೆ 10.05ಕ್ಕೆ ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ 10.50ಕ್ಕೆ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಬಂದಿಳಿದು, ರಸ್ತೆ ಮಾರ್ಗವಾಗಿ ಕ್ಷೇತ್ರಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮಂದಿರವನ್ನು ಉದ್ಘಾಟಿಸಿದ ಬಳಿಕ, ಮತ್ತೆ ಬೆಂಗಳೂರಿಗೆ ಹಿಂದಿರುಗಿ, ಅಲ್ಲಿಂದ ಕೇರಳದ ತಿರುವಂತನಪುರಂಗೆ ಪ್ರಯಾಣ ಮುಂದುವರಿಸಲಿದ್ದಾರೆ.

