ಗೋಪಾಲ್‌ಗಂಜ್, ಮಾ.9: ಪ್ರಿಯಕರನ ಬಿಡುಗಡೆಗಾಗಿ ಒತ್ತಾಯಿಸಿ ಮಹಿಳೆಯೊಬ್ಬರು ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೋಪಾಲ್‌ಗಂಜ್ ಜಿಲ್ಲೆಯ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಪ್ರಿಯಕರನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಳ್ಳಿಯಲ್ಲಿರುವ ಮೊಬೈಲ್ ಟವರ್ ಏರಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಗ್ರಾಮಸ್ಥರು ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಆರಂಭದಲ್ಲಿ ಆಕೆ ಕೆಳಗಿಳಿಯಲು ನಿರಾಕರಿಸಿದ್ದಳು.
ಮಹಿಳೆ ಹಾಗೂ ಆಕೆಯ ಪ್ರಿಯಕರ ಪವನ್ ಚೌಹಾಣ್ ಇಬ್ಬರೂ ಗೋಪಾಲ್‌ಗಂಜ್ ಜಿಲ್ಲೆಯ ಬಂಕತಾ ಮಾಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಗುರುವಾರ ಮಹಿಳೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರಿಂದ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಅನುಮಾನದಿಂದ ಪೊಲೀಸರು ಪವನ್ ಚೌಹಾಣ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಈ ವಿಷಯ ಮಹಿಳೆಗೆ ತಿಳಿದ ತಕ್ಷಣವೇ ಆಕೆ ಶುಕ್ರವಾರ ಹಳ್ಳಿಯಲ್ಲಿರುವ ಮೊಬೈಲ್ ಟವರ್ ಏರಿ ಪ್ರಿಯಕರನ ಬಿಡುಗಡೆಗಾಗಿ ಆಗ್ರಹಿಸಿದ್ದಾಳೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಂಧಿತ ಪ್ರಿಯಕರನನ್ನು ಅಲ್ಲಿಗೆ ಕರೆತಂದು ಮಾತನಾಡಿಸಿದ ನಂತರ ಮಹಿಳೆ ಕೊನೆಗೂ ಟವರ್‌ನಿಂದ ಕೆಳಗಿಳಿದಿದ್ದಾಳೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

