ಬೆಂಗಳೂರು: ಕಾಲ್ತುಳಿತ ದುರಂತದಲ್ಲಿ 11 ಅಮಾಯಕರ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂಬುದು ಜಗಜ್ಜಾಹೀರಾಗಿರುವ ಸತ್ಯ. ಈ ಅನಾಹುತದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೊದಲು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್,
ಸರ್ಕಾರ ಪರಿಹಾರ ರೂಪದಲ್ಲಿ ಎಷ್ಟೇ ಲಕ್ಷ ಕೊಟ್ಟರೂ ಹೋದ ಜೀವಗಳು ಮರಳಿ ಬರುವುದಿಲ್ಲ ಎಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಮೃತರ ಕುಟುಂಬದವರಿಗೆ ನ್ಯಾಯ ಸಿಗಬೇಕಾದರೆ ಘಟನೆ ನೈತಿಕ ಹೊಣೆ ಹೊತ್ತು ಸರ್ಕಾರದ ಸಿಎಂ ಮತ್ತು ಡಿಸಿಎಂ ಇಬ್ಬರೂ ಮೊದಲು ರಾಜೀನಾಮೆ ಕೊಡಬೇಕು.
ನಿಮ್ಮ ನಿರ್ಲಕ್ಷದಿಂದ ಸಂಭವಿಸಿದ ದುರಂತಕ್ಕೆ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ, ನೀವು ಅಧಿಕಾರದಲ್ಲಿ ಮುಂದುವರಿಯುವುದು ರಾಜ್ಯದ ಜನರಿಗೆ ಮಾಡುತ್ತಿರುವ ದ್ರೋಹ. ಸಿಎಂ, ಡಿಸಿಎಂ ರಾಜೀನಾಮೆಯೊಂದೇ ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

