ಬೆಂಗಳೂರು, ಮಾರ್ಚ್ 10: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದ ಹಲವು ಭಾಗಗಳಲ್ಲಿ LPG ಸಿಲಿಂಡರ್‌ಗಳ ಕೊರತೆ ಎದುರಾಗುತ್ತಿರುವ ಸುದ್ದಿಗಳ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ. ಇದರ ಹಿನ್ನೆಲೆ ಕೆಲವೆಡೆ ಜನರು ಮುಂಚಿತವಾಗಿ ಇಂಧನ ಸಂಗ್ರಹಿಸಲು ಮುಂದಾಗಿದ್ದು, ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ಸಾಲು ಕಾಣಿಸಿಕೊಂಡಿರುವ ಘಟನೆಗಳು ವರದಿಯಾಗಿವೆ. ಕೆಲವರು ನೀರಿನ ಟ್ಯಾಂಕ್‌ಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಆದರೆ, ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ (AKFPT) ಸ್ಪಷ್ಟಪಡಿಸಿದೆ.
ರಾಜ್ಯದ ಎಲ್ಲಿಯೂ ಪೆಟ್ರೋಲ್ (MS) ಮತ್ತು ಡೀಸೆಲ್ (HSD) ಕೊರತೆ ಇಲ್ಲ. ಭಾರತ ಪೆಟ್ರೋಲಿಯಂ (BPCL), ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಮೂರು ತೈಲ ಮಾರಾಟ ಸಂಸ್ಥೆಗಳಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ರಾಜ್ಯದ ಎಲ್ಲಾ ಟರ್ಮಿನಲ್‌ಗಳು ಮತ್ತು ಡಿಪೋಗಳಲ್ಲಿ ಸಮರ್ಪಕ ಹಾಗೂ ನಿರಂತರ ಇಂಧನ ಸಂಗ್ರಹ ಮಾಡಲಾಗಿದೆ ಎಂದು ಫೆಡರೇಷನ್ ತಿಳಿಸಿದೆ.
ಇದರ ಜೊತೆಗೆ ಕರ್ನಾಟಕದಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್‌ಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಸಾಮಾನ್ಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ ಎಂದು ಹೇಳಿದೆ.
ಇಂಧನ ಕೊರತೆ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಂಧನ ಖರೀದಿ ಮಾಡುವುದನ್ನು ತಪ್ಪಿಸಬೇಕು. ರಾಜ್ಯದ ಇಂಧನ ಸರಬರಾಜು ವ್ಯವಸ್ಥೆ ಸ್ಥಿರವಾಗಿ ಮತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು AKFPT ಮನವಿ ಮಾಡಿದೆ.
ತೈಲ ಮಾರಾಟ ಕಂಪನಿಗಳೊಂದಿಗೆ ಫೆಡರೇಷನ್ ನಿರಂತರ ಸಂಪರ್ಕದಲ್ಲಿದ್ದು, ಪೆಟ್ರೋಲ್ ಡೀಲರ್‌ಗಳು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುವಂತೆ ಸೂಚಿಸಲಾಗಿದೆ. ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮುಂದುವರಿಯಲಿದೆ ಎಂದು AKFPT ಮಾಧ್ಯಮ ಪ್ರಕಟಣೆಯಲ್ಲಿ ಭರವಸೆ ನೀಡಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ Siddaramaiah ಅವರು ಕೇಂದ್ರ ಪೆಟ್ರೋಲಿಯಂ ಸಚಿವ Hardeep Singh Puri ಅವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಗೃಹ ಬಳಕೆಯ ಎಲ್‌ಪಿಜಿಗೆ ಆದ್ಯತೆ ನೀಡುವ ಕೇಂದ್ರದ ಇತ್ತೀಚಿನ ಆದೇಶದಿಂದ ಬೆಂಗಳೂರಿನಲ್ಲಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ವ್ಯತ್ಯಯ ಉಂಟಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಿದ್ದಾರೆ.
ನಗರದ ಅನೇಕ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ವಾಣಿಜ್ಯ ಸಿಲಿಂಡರ್ ಸಿಗದೆ ಸಮಸ್ಯೆ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಲವಾರು ಹೋಟೆಲ್‌ಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಸಣ್ಣ ಹೋಟೆಲ್, ಮೆಸ್ಸು ಹಾಗೂ ಕೇಟರಿಂಗ್ ಘಟಕಗಳ ಮೇಲೆ ಲಕ್ಷಾಂತರ ಜನರು ಅವಲಂಬಿತರಾಗಿರುವುದರಿಂದ ಈ ಕೊರತೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ದಿನನಿತ್ಯದ ಜೀವನಕ್ಕೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತೈಲ ಕಂಪನಿಗಳಾದ Indian Oil Corporation, Hindustan Petroleum ಮತ್ತು Bharat Petroleum ಮೂಲಕ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

