ಸೇಲಂ, ಮಾರ್ಚ್ 20: ಸೇಲಂ–ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯ ಉತ್ತಮಸೋಲಪುರಂ ಸಮೀಪ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಮೃತರಲ್ಲಿ 11 ತಿಂಗಳ ಮಗು ಹಾಗೂ ಮೂರು ತಿಂಗಳ ಗರ್ಭಿಣಿ ಮಹಿಳೆ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.
ಈರೋಡ್‌ನಿಂದ ಸೇಲಂ ಕಡೆಗೆ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸರ್ಕಾರಿ ಬಸ್‌ಗೆ ಬ್ರೇಕ್ ವೈಫಲ್ಯ ಉಂಟಾಗಿ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಬಸ್ ಹೆದ್ದಾರಿಯ ಡಿವೈಡರ್ ದಾಟಿ ಎದುರು ದಾರಿಯಲ್ಲಿ ನುಗ್ಗಿ, ದೇವಸ್ಥಾನದ ಉತ್ಸವಕ್ಕೆ ತೆರಳುತ್ತಿದ್ದ ಪಿಕಪ್ ವ್ಯಾನ್ ಮತ್ತು ಆಸ್ಪತ್ರೆಗೆ ಹೋಗುತ್ತಿದ್ದ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಪಿಕಪ್ ವ್ಯಾನ್‌ನಲ್ಲಿದ್ದ ನೈಕಾರಪಟ್ಟಿಯ ಸೆಲ್ವರಾಜ್ (60), ಅವರ ಮೊಮ್ಮಕ್ಕಳಾದ ಜೀವಿಕಾ (11 ತಿಂಗಳು), ನಿತೀಶ್ಕಾ (5 ವರ್ಷ), ಸೊಸೆ ಸತ್ಯ (25) ಸೇರಿದಂತೆ ಒಂದೇ ಕುಟುಂಬದ ಹಲವರು ಸಾವನ್ನಪ್ಪಿದ್ದಾರೆ. ಜೊತೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತಾಯಿ–ಮಗ ಕೂಡ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದ ಬಳಿಕ ಪರಾರಿಯಾಗಿದ್ದ ಬಸ್ ಚಾಲಕ ಅಯ್ಯಂದುರೈನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್. ಬೃಂದಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

