ಬೆಂಗಳೂರು : ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು 65 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.
ಮೋದಿ ಟ್ವೀಟ್ :
ಅನುಭವಿ ರಾಜಕಾರಣಿ ಆಗಿರುವ ಅವರು ಸಕ್ರಿಯವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅವರು ಕೊಡುಗೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಆರೋಗ್ಯಕರ ಜೀವನ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹುಟ್ಟುಹಬ್ಬದ ಶುಭಾಶಯ ಕೋರಿದ ದೇವೇಗೌಡರು
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಹ ಶುಭಕೋರಿದ್ದು, ನನ್ನ ಪುತ್ರ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಪ್ರೀತಿಪೂರ್ವಕ ಶುಭಾಶಯಗಳು ಎಂದು ತಿಳಿಸಿದ್ದಾರೆ. ಭಗವಂತ ನಿಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ದೀರ್ಘ ಕಾಲ ಜನಸೇವೆ ಮಾಡುವ ಶಕ್ತಿ, ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ.
ಉಕ್ಕು ಕ್ಷೇತ್ರದಲ್ಲಿ ಹಸಿರು ಕ್ರಾಂತಿ; ಮೋದಿ ಕನಸು ಅನಾವರಣ ಮಾಡಿದ ಹೆಚ್ ಡಿ ಕುಮಾರಸ್ವಾಮಿ ಜನತೆಯ ಹಿತಕ್ಕಾಗಿ ನಿಮ್ಮ ನಿಸ್ವಾರ್ಥ ಜನಸೇವೆ ಮುಂದುವರೆಸಿ. ಜನರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಭಗವಂತನ ದಯೆಯಿಂದ ಜನರು ನೀಡುವ ಎಲ್ಲಾ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ಸಮಾಜಕ್ಕೆ ಅಂಕಿತರಾಗಿ ದುಡಿಮೆ ಮಾಡಿ. ಆರೋಗ್ಯವನ್ನು ಕಾಪಾಡಿಕೊಂಡು ಜನತೆಯ ಆಶೋತ್ತರಳಿಗೆ ಸ್ಪಂದಿಸಿ ಎಂದು ಹೆಚ್ ಡಿ ದೇವೇಗೌಡ್ರು ಹೇಳಿದ್ದಾರೆ.
ಅನೇಕ ಗಣ್ಯರಿಂದ ಶುಭಾಷಯ :
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ.
ವಿಜೃಂಭಣೆಯ ಜನ್ಮದಿನ ದಿನಾಚರಣೆ ಇಲ್ಲ :
ನನ್ನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಬೇಡಿ ಎಂದು ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ಧಾರೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅಂದು ನಾನು ಹೊಸದಿಲ್ಲಿಯಲ್ಲಿಯೇ ಇರಬೇಕಾಗಿದೆ. ಅಲ್ಲದೆ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲ ಕಲಾಪವೂ ನಡೆಯುತ್ತಿದೆ.ಇಂಥ ಸನ್ನಿವೇಶದಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಬೇಡ ಎನ್ನುವುದು ನನ್ನ ಅಭಿಪ್ರಾಯ. ತಾವು ಇದ್ದಲ್ಲಿಂದಲೇ ಹರಸಿ, ಆಶೀರ್ವದಿಸಿ. ಅಷ್ಟು ಸಾಕು. ಸಾಧ್ಯವಾದರೆ ಸಮಾಜಕ್ಕೆ, ದುರ್ಬಲ ಜನರಿಗೆ ಏನಾದರೂ ಸಹಾಯ ಮಾಡಿ. ಜನಸೇವೆ ಜಾತ್ಯತೀತ ಜನತಾದಳ ಪಕ್ಷದ ಮೂಲತತ್ವ. ಅದೇ ನನಗೆ ತಾವು ಕೊಡುವ ಉಡುಗೊರೆ ಎಂದು ಮನವಿ ಮಾಡಿದ್ದಾರೆ.

