ವಾಷಿಂಗ್ಟನ್, ಮಾರ್ಚ್ 26: ಇರಾನ್ ಜೊತೆಗಿನ ಯುದ್ಧ ಆರಂಭವಾದ ಬಳಿಕ ಪ್ರತಿ ದಿನ ಹೊಸ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಅಮೆರಿಕ ಅಧ್ಯಕ್ಷ Donald Trump ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧ ಇಂದು 27ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆ, “ಇರಾನ್ ನಮ್ಮ ಮುಂದೆ ಮಂಡಿಯೂರಿದೆ, ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ” ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ನಡೆದ ರಿಪಬ್ಲಿಕನ್ ನಿಧಿ ಸಂಗ್ರಹಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಮ್ಮೊಂದಿಗೆ ಮಾತುಕತೆ ನಡೆಸುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹೆದರುತ್ತಿದೆ. ಒಪ್ಪಂದಕ್ಕೆ ಬರಲು ಅವರು ಕಾತುರರಾಗಿದ್ದಾರೆ. ಆದರೆ, ಅದನ್ನು ಒಪ್ಪಿಕೊಂಡರೆ ತಮ್ಮದೇ ಜನರಿಂದ ಅಪಾಯ ಎದುರಿಸಬೇಕಾಗುತ್ತದೆ ಎಂಬ ಭಯ ಇರಾನ್ ನಾಯಕರನ್ನು ಕಾಡುತ್ತಿದೆ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇರಾನ್, ಅಮೆರಿಕದೊಂದಿಗೆ ಯಾವುದೇ ರೀತಿಯ ಕದನವಿರಾಮ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. “ಕದನವಿರಾಮದ ಬಗ್ಗೆ ಹಾಗೂ ಅದರ ಷರತ್ತುಗಳನ್ನು ಟ್ರಂಪ್ ನಿರ್ಧರಿಸಲು ನಾವು ಬಿಡುವುದಿಲ್ಲ” ಎಂದು ಇರಾನ್ ಹೇಳಿದೆ. ಯುದ್ಧ ನಿಲ್ಲಿಸಲು ಐದು ಷರತ್ತುಗಳನ್ನು ಕೂಡ ಇರಾನ್ ಮುಂದಿಟ್ಟಿದೆ.
ಇದರ ಮಧ್ಯೆ ಟ್ರಂಪ್ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. “ನಾವು ನಿಮ್ಮನ್ನು ಇರಾನ್‌ನ ಮುಂದಿನ ಸುಪ್ರೀಂ ಲೀಡರ್ ಆಗಿ ಬಯಸುತ್ತೇವೆ ಎಂದು ಇರಾನ್ ನಾಯಕರು ಹೇಳಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ” ಎಂದು ಹೇಳಿದ್ದಾರೆ.
ಕಳೆದ ತಿಂಗಳು ಇರಾನ್ ಸುಪ್ರೀಂ ನಾಯಕ Ali Khamenei ಹತ್ಯೆಯ ನಂತರ ದೇಶದಲ್ಲಿ ನಾಯಕತ್ವದ ಅನಿಶ್ಚಿತತೆ ಮುಂದುವರಿದಿದೆ. ಅವರ ಪುತ್ರ Mojtaba Khamenei ಅವರನ್ನು ಸುಪ್ರೀಂ ಲೀಡರ್ ಆಗಿ ಮುಂದಿರಿಸಲಾಗಿದೆ. ಆದರೆ ಯುದ್ಧ ಪ್ರಾರಂಭವಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಗಮನಾರ್ಹವಾಗಿದೆ.

