ಕಟ್ಮಂಡು : ನೇಪಾಳದಲ್ಲಿ ಸೋಷಿಯಲ್ ಮೀಡಿಯಾಗೆ ನಿಷೇಧ ಹೇರಿದ್ದರಿಂದ ಶುರುವಾದ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆದಿದ್ದು, ಗೋಲಿಬಾರ್ ನಡೆದು 19 ಮಂದಿ ಸಾವನ್ನಪ್ಪಿ, ನೂರಾರು ಜನ ಗಾಯಗೊಂಡ ಹಿನ್ನೆಲೆ ಇಂದು ಮಂಗಳವಾರ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜನರಲ್-ಝೆಡ್ ಪ್ರತಿಭಟನಾಕಾರು ಕರ್ಪ್ಯೂ ನಿರ್ಬಂಧ ಮುರಿದು ನಿನ್ನೆ ಕಠ್ಮಂಡುವಿನ ಸಂಸತ್ ಕಚೇರಿಗೆ ನುಗ್ಗಿದ್ದು, ಹೋರಾಟ ಹಿಂಸಾತ್ಮಕ ರೂಪ ಪಡೆದು ಗೋಲಿಬಾರ್ ನಡೆದಿದೆ. ಸೋಷಿಯಲ್ ಮೀಡಿಯಾ ಬ್ಯಾನ್ ಅನ್ನು ಸರ್ಕಾರ ನಿನ್ನೆಯೇ ವಾಪಸ್ ಪಡೆದರೂ, ಹಿಂಸಾಚಾರ ನಿಂತಿರಲಿಲ್ಲ. ಪ್ರಧಾನಿ ಕೆ.ಪಿ.ಶರ್ಮಾ ಒಲಿ ರಾಜೀನಾಮೆ ನೀಡುವಂತೆ ಜನರಲ್ -ಝೆಡ್ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು ಎನ್ನಲಾಗಿದೆ.
ಇಂದು ನೂರಾರು ಪ್ರತಿಭಟನಾಕಾರರು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರಧಾನಿ ಮತ್ತು ಇಂಧನ ಸಚಿವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆ ಒಲಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ರಾಜೀನಾಮೆ ನೀಡುವ ಮುನ್ನವೇ ಏತನ್ಮಧ್ಯೆ, ನೇಪಾಳದ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಇಪ್ಪತ್ತೊಂದು ಸಂಸದರು ಇಂದು ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ನೀಡಿದರು.
ರಾಜಧಾನಿಯ ಹಲವು ಭಾಗಗಳಲ್ಲಿ ಜನರಲ್ ಝಡ್ ಪ್ರತಿಭಟನಾಕಾರರು, “ಕೆಪಿ ಚೋರ್, ದೇಶ್ ಛೋಡ್” (ಕೆಪಿ ಕಳ್ಳ, ದೇಶ ಬಿಟ್ಟು ತೊಲಗಿ) ಮತ್ತು “ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ” ಮುಂತಾದ ಘೋಷಣೆಗಳನ್ನು ಕೂಗಿದರು. ಭಕ್ತಪುರದ ಬಾಲ್ಕೋಟ್‌ನಲ್ಲಿರುವ ಪ್ರಧಾನಿ ಓಲಿ ಅವರ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು. ಓಲಿ ಪ್ರಸ್ತುತ ಬಲ್ವತಾರ್‌ನಲ್ಲಿರುವ ಪ್ರಧಾನಿ ನಿವಾಸದಲ್ಲಿದ್ದಾರೆ ಎನ್ನಲಾಗಿದೆ.
ನೇಪಾಳ ಸರ್ಕಾರ ದೇಶದಲ್ಲಿ ಸಾಮಾಜಿಕ ಭ್ರಷ್ಟಾಚಾರ, ತಪ್ಪು ಮಾಹಿತಿ ಹರಡುವಿಕೆ ತಡೆಯುವ ಸಲುವಾಗಿ ನಿಷೇಧ ಹೇರಲಾಗಿದೆ ಎಂದಿದ್ದು, ಜೊತೆಗೆ ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು ಎರಡು ಡಜನ್ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ತಮ್ಮ ಕಂಪನಿಗಳನ್ನು ದೇಶದಲ್ಲಿ ಅಧಿಕೃತವಾಗಿ ನೋಂದಾಯಿಸಲು ಪದೇ ಪದೇ ನೋಟಿಸ್ ನೀಡಿದೆ.
ದುಬೈಗೆ ಪಲಾಯನ ಸಾಧ್ಯತೆ
ಸಾಮಾಜಿಕ ಜಾಲತಾಣಗಳ ನಿಷೇಧದ ನಂತರ ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ಪ್ರತಿಭಟನೆ ಮಧ್ಯೆ, ದೇಶದ ಪ್ರಧಾನಿ ಕೆ.ಪಿ. ಓಲಿ ದುಬೈಗೆ ತೆರಳುವ ಸಾಧ್ಯತೆಯಿದೆ ಇದೆ ಎಂದು ತಿಳಿದುಬಂದಿದೆ.

