ಚಿಕ್ಕೋಡಿ : ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕರ ನಡುವೆ ಉಂಟಾದ ಮನಸ್ತಾಪ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದಿದೆ.
ರಿಕ್ಷಾ ಸರತಿ ಸಾಲಿನಲ್ಲಿ ವಾಹನ ನಿಲ್ಲಿಸುವ ವಿಚಾರವಾಗಿ ಆಟೋ ಚಾಲಕರ ನಡುವೆ ವಾಗ್ವಾದ ಉಂಟಾಗಿ, ಅದು ವೈಮನಸ್ಸಿಗೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳು ಅಶೋಕ ವಡ್ಡರ (27) ಅವರ ಮೇಲೆ ಹಲ್ಲೆ ನಡೆಸಿ, ತಲೆಗೆ ವಸ್ತುವಿನಿಂದ ಬಡಿದು ಕೊಲೆ ಮಾಡಿದರೆಂದು ತಿಳಿದುಬಂದಿದೆ.
ಶಿವಾ ವಡ್ಡರ, ಸಾಗರ ವಡ್ಡರ ಹಾಗೂ ವಿನೋದ್ ವಡ್ಡರರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಅಶೋಕ ವಡ್ಡರ ಮತ್ತು ಆರೋಪಿಗಳ ನಡುವೆ ಇದೇ ವಿಚಾರವಾಗಿ ಮುಂಚಿನಿಂದಲೂ ದ್ವೇಷ ಇತ್ತು ಎನ್ನಲಾಗಿದೆ.
ಘಟನೆ ಎರಡು ದಿನಗಳ ಹಿಂದೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ಸೂರಜ ಕೋರೆ, ಚಿಕ್ಕೋಡಿ ವರದಿಗಾರರು.

