ಮಂಗಳೂರು, ಡಿಸೆಂಬರ್ 10: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾಡಿದ ಆರೋಪದ ಹಿನ್ನಲೆಯಲ್ಲಿ ಎಸ್‌ಐಟಿ ನಡೆಸಿದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಧರ್ಮಸ್ಥಳದ ವಿರುದ್ಧ ‘ಬುರುಡೆ ಗ್ಯಾಂಗ್’ ಷಡ್ಯಂತ್ರ ರೂಪಿಸಿದ್ದೇವೆಂಬುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ. ಜಯಂತ್ ಮತ್ತು ಸುಜಾತಾ ಭಟ್ ಸೇರಿದಂತೆ ಆರು ಜನರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್‌ಐಟಿ ದೃಢಪಡಿಸಿದೆ.
ಹಣದ ಆಮಿಷಕ್ಕೆ ಒಳಗಾಗಿ ಎ-1 ಆರೋಪಿಯಾಗಿರುವ ಚಿನ್ನಯ್ಯ ಬುರುಡೆ ಕಥೆಯನ್ನು ಸೃಷ್ಟಿಸಿದ್ದಾನೆ. ಬುರುಡೆ ಗ್ಯಾಂಗ್ ಹಣ ನೀಡಿ ಚಿನ್ನಯ್ಯನಿಂದ ಸುಳ್ಳು ಹೇಳಿಕೆ ರೆಕಾರ್ಡ್ ಮಾಡಿಸಿಕೊಂಡಿದ್ದಾಗಿ ತನಿಖೆಯಲ್ಲಿ ಸ್ಪಷ್ಟವಾಗಿದೆ. ಅಪರಿಚಿತ ಶವಗಳನ್ನು ಹೂತಿದ್ದೇನೆಂದು ಹೇಳುವ ವಿಡಿಯೋವನ್ನು ಚಿನ್ನಯ್ಯನಿಂದ ಮಾಡಿಸಿಕೊಳ್ಳಲಾಗಿತ್ತು. ಚಿನ್ನಯ್ಯಗೆ ಪರಿಚಿತನಾಗಿದ್ದ ವಿಠ್ಠಲ ಗೌಡ, ಆತನನ್ನು ಮಹೇಶ್ ತಿಮರೋಡಿ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲ ನಡೆದ ಸಭೆಯಲ್ಲಿ ಮಟ್ಟಣ್ಣನವರ್, ಜಯಂತ್ ಮತ್ತು ವಿಠ್ಠಲಗೌಡ ಭಾಗವಹಿಸಿದ್ದು, ಧರ್ಮಸ್ಥಳ ಮೇಲ್ವಿಚಾರಕರ ವಿರುದ್ಧ ಪಿತೂರಿ ರೂಪಿಸುವ ಪ್ಲ್ಯಾನ್ ನಡೆದಿತ್ತು. ಅದರ ಅಂಗವಾಗಿ ಬುರುಡೆ ತಲೆಯನ್ನು ಚಿನ್ನಯ್ಯಗೆ ನೀಡಿ, ಪೊಲೀಸರಿಗೆ ದೂರು ನೀಡುವಂತೆ ನಡೆಸಿಕೊಂಡಿದ್ದರು. ಬಳಿಕ ನ್ಯಾಯಾಧೀಶರ ಮುಂದೆ ಸುಳ್ಳು ಹೇಳಿಕೆ ನೀಡಲು ಚಿನ್ನಯ್ಯನನ್ನು ಪ್ರೇರೇಪಿಸಲಾಗಿತ್ತು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿ ಒಬ್ಬ ಸ್ವಾಮೀಜಿಯ ಹೆಸರನ್ನೂ ಉಲ್ಲೇಖಿಸಿದ್ದರು. “ಚಿನ್ನಯ್ಯ ಹಾಗೂ ನಾನು ಆ ಮಠಕ್ಕೆ ಹೋಗಿದ್ದೇವೆ, ನಮ್ಮ ಜೊತೆಗೆ ಸೌಜನ್ಯ ಮನೆಯವರೂ ಇದ್ದರು. ಸ್ವಾಮೀಜಿಯ ಮುಂದೆ ಸುಮಾರು ಒಂದೂವರೆ ಗಂಟೆಗಳ ಕಾಲ ಚಿನ್ನಯ್ಯ ಎಲ್ಲವನ್ನೂ ಹೇಳಿದ್ದ. ಯಾರಿಂದ ಅತ್ಯಾಚಾರ ನಡೆದಿದೆ, ಯಾರು ಮಾಡಿಸಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಿದ್ದ” ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೋರ್ಟ್ ಜಾಮೀನು ನೀಡಿದ್ದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ನವೆಂಬರ್ 26ರಂದು ಜಾಮೀನು ಮಂಜೂರಾದರೂ, ಇಬ್ಬರು ಜಾಮೀನುದಾರರು ಮತ್ತು 1 ಲಕ್ಷ ಭದ್ರತಾ ಬಾಂಡ್ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಜಾಮೀನುದಾರರು ಮತ್ತು ಭದ್ರತಾ ಹಣ ಠೇವಣಿ ಆಗದ ಹಿನ್ನೆಲೆಯಲ್ಲಿ, ಚಿನ್ನಯ್ಯ ಇನ್ನೂ ಶಿವಮೊಗ್ಗ ಜೈಲಿನಲ್ಲೇ ಉಳಿದಿದ್ದಾನೆ.

