ಬಳ್ಳಾರಿ: ನಗರದಲ್ಲಿ ಆಟೋ LPG ಅಭಾವ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳ್ಳಾರಿ ನಗರದಲ್ಲಿರುವ 6 LPG ಸೆಂಟರ್‌ಗಳಲ್ಲಿ ಸಂಪೂರ್ಣವಾಗಿ ಸ್ಟಾಕ್ ಖಾಲಿಯಾಗಿದ್ದು, ಒಂದೇ ಒಂದು ಬಂಕ್‌ಗೆ ಮಾತ್ರ ಗ್ಯಾಸ್ ಲೋಡ್ ಬಂದಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಂಜಿ ರಸ್ತೆಯಲ್ಲಿರುವ LPG ಗ್ಯಾಸ್ ಬಂಕ್‌ನಲ್ಲಿ ಮಾತ್ರ ಸೀಮಿತ ಪ್ರಮಾಣದಲ್ಲಿ ಸ್ಟಾಕ್ ಲಭ್ಯವಿದ್ದು, ಇದರಿಂದಾಗಿ ಕಿಲೋಮೀಟರ್‌ಗಳಷ್ಟು ಉದ್ದವಾದ ಆಟೋಗಳ ಸಾಲು ಕಾಣಿಸುತ್ತಿದೆ. ಚಾಲಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇದರ ನಡುವೆ LPG ದರದಲ್ಲೂ ದಿಢೀರ್ ಏರಿಕೆ ಆಗಿದ್ದು, ₹93ರಿಂದ ₹105ಕ್ಕೆ ಏರಿಕೆಯಾಗಿದೆ. ಲೀಟರ್‌ಗೆ ₹12 ಹೆಚ್ಚಳವಾಗಿರುವುದರಿಂದ ಆಟೋ ಚಾಲಕರಿಗೆ ಮತ್ತಷ್ಟು ಹೊರೆ ಹೆಚ್ಚಾಗಿದೆ.
ಒಂದೆಡೆ ಗ್ಯಾಸ್ ಅಭಾವ, ಮತ್ತೊಂದೆಡೆ ದರ ಏರಿಕೆ—ಈ ಡಬಲ್ ಹೊಡೆತದಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. “ಹೀಗಾದ್ರೆ ಬದುಕೋದು ಹೇಗೆ?” ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸ್ತುತ ಒಂದು ಬಂಕ್‌ನಲ್ಲಿರುವಷ್ಟೇ ಸ್ಟಾಕ್ ವಿತರಣೆ ನಡೆಯುತ್ತಿದ್ದು, ಉಳಿದ ಎಲ್ಲಾ ಬಂಕ್‌ಗಳಲ್ಲಿ ಸಂಪೂರ್ಣವಾಗಿ ಗ್ಯಾಸ್ ಕೊರತೆ ಎದುರಾಗಿದೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.

