ಬೆಂಗಳೂರು, ಏಪ್ರಿಲ್ 09: ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆಯ ಸಚಿವ ಕೆಚ್.ಎಚ್. ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಈಗಾಗಲೇ ಸದನದಲ್ಲಿಯೂ ಉತ್ತರ ನೀಡಿರುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಯಾರಾದರೂ ಕಾರ್ಡ್ ರದ್ದಾದರೆ, ಸಂಬಂಧಿಸಿದ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ ಇರುವವರಿಗೆ 15 ದಿನಗಳೊಳಗೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇನ್ನೂ ಎಪಿಎಲ್ ಕಾರ್ಡ್ ಕುರಿತು ಮಾತನಾಡಿದ ಸಚಿವರು, ಎಪಿಎಲ್‌ಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ತಕ್ಷಣ ಮಾಡುತ್ತಿಲ್ಲ ಎಂದರು. ಆದರೆ, ಎಪಿಎಲ್ ಕಾರ್ಡ್‌ಗೆ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿರುವುದರಿಂದ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಅರ್ಹತೆ ಹೊಂದದವರು ಎಪಿಎಲ್ ಕಾರ್ಡ್ ಪಡೆಯಬೇಕು ಎಂದು ತಿಳಿಸಿದ ಅವರು, ಸುಮಾರು 7 ಲಕ್ಷ ಕಾರ್ಡ್‌ಗಳು ಅರ್ಹತೆ ಮೀರಿದ ಎಪಿಎಲ್ ವರ್ಗದಲ್ಲಿದ್ದು, ಸುಮಾರು 14 ಲಕ್ಷ ಎಪಿಎಲ್ ಕಾರ್ಡ್‌ಧಾರರು ಬಿಪಿಎಲ್ ಪಟ್ಟಿಯಲ್ಲಿ ಸೇರಿರುವುದಾಗಿ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ, ಬಿಪಿಎಲ್ ಅರ್ಹರಿಗೆ ಯಾವುದೇ ತೊಂದರೆ ಆಗದಂತೆ ಹಂತ ಹಂತವಾಗಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

