ಹೈದರಾಬಾದ್: ‘ಜನ ನಾಯಗನ್’ ಸಿನಿಮಾದಂತೆ, ದೊಡ್ಡ ನಿರೀಕ್ಷೆ ಮೂಡಿಸಿದ್ದ ಮತ್ತೊಂದು ಬಹು ನಿರೀಕ್ಷಿತ ಚಿತ್ರಕ್ಕೂ ಇದೀಗ ಲೀಕ್ ಭೀತಿ ಎದುರಾಗಿದೆ. ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಈ ಚಿತ್ರಗಳ ಪ್ರಮುಖ ದೃಶ್ಯಗಳು ರಿಲೀಸ್‌ಗೆ ಮುನ್ನವೇ ಸೋರಿಕೆಯಾಗುತ್ತಿರುವುದು ಚಿತ್ರತಂಡಗಳ ಆತಂಕಕ್ಕೆ ಕಾರಣವಾಗಿದೆ.
ಈಗ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿವೆ. ಇದರಿಂದ ಚಿತ್ರತಂಡದ ಚಿಂತೆ ಹೆಚ್ಚಾಗಿದೆ. ಗೌಪ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಸದಾ ಎಚ್ಚರಿಕೆ ವಹಿಸುವ ರಾಜಮೌಳಿ ಅವರಿಗೆ ಇದು ದೊಡ್ಡ ಹೊಡೆತವಾಗಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭಾರೀ ಸೆಟ್ ಹಾಕಿ ಶೂಟಿಂಗ್ ನಡೆಸಲಾಗುತ್ತಿದ್ದರೂ, ಕೆಲವರು ಒಳಗಿನಿಂದಲೇ ದೃಶ್ಯಗಳನ್ನು ಸೋರಿಕೆ ಮಾಡುತ್ತಿರುವ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಚಿತ್ರೀಕರಿಸಿದ ಆ್ಯಕ್ಷನ್ ಸೀನ್‌ಗಳು ಮಾತ್ರವಲ್ಲ, ವಿದೇಶಗಳಲ್ಲಿ ಚಿತ್ರೀಕರಿಸಿದ ದೃಶ್ಯಗಳೂ ಈಗಾಗಲೇ ಲೀಕ್ ಆಗಿರುವುದು ಗಮನಾರ್ಹ.
ದೊಡ್ಡ ಬಜೆಟ್ ಸಿನಿಮಾಗಳಿಗೆ ಹೆಚ್ಚಿನ ಕ್ರೇಜ್ ಇರುವುದರಿಂದ, ಇಂತಹ ಲೀಕ್ ವಿಡಿಯೋಗಳನ್ನು ಹಂಚುವ ಮೂಲಕ ಕೆಲವು ಸಾಮಾಜಿಕ ಜಾಲತಾಣ ಪೇಜ್‌ಗಳು ತಮ್ಮ ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.
ರಾಜಮೌಳಿ ಸಿನಿಮಾಗಳ ವಿಶೇಷತೆ ಎಂದರೆ ಅದ್ದೂರಿ ವಿಸ್ವಲ್ ಎಫೆಕ್ಟ್ಸ್. ಸಾಮಾನ್ಯ ದೃಶ್ಯಗಳನ್ನು ಸಹ ಅದ್ಭುತವಾಗಿ ತೋರಿಸುವ ಸಾಮರ್ಥ್ಯ ಅವರಿಗೆ ಇದೆ. ಆದರೂ ಲೀಕ್ ಆಗುವ ಕಚ್ಚಾ ದೃಶ್ಯಗಳು ಪ್ರೇಕ್ಷಕರಲ್ಲಿ ನಿರೀಕ್ಷೆ ಕಡಿಮೆ ಮಾಡಬಹುದು ಎಂಬ ಭಯ ಚಿತ್ರತಂಡವನ್ನು ಕಾಡುತ್ತಿದೆ.
‘ವಾರಣಾಸಿ’ ಚಿತ್ರದಲ್ಲಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾ ಮುಂದಿನ ವರ್ಷದ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ.

