ಬೆಂಗಳೂರು: ಅಂಕೋಲಾ ಬಳಿ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಹಾಗೂ ಟ್ಯಾಂಕರ್ ಮತ್ತು ಕಾರಿನಲ್ಲಿದ್ದ ನಾಲ್ವರು ಮತ್ತು ಉಳುವರೆಯಲ್ಲಿ ಓರ್ವ ಮಹಿಳೆ ಸೇರಿ 10 ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು, ಈವರೆಗೆ ಐದು ಮೃತದೇಹ ಪತ್ತೆಯಾಗಿದೆ.ಭೂಕುಸಿತದ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಈ ನಡುವೆ ಕಳೆದ ವರ್ಷ ಮಣ್ಣು ಕುಸಿತವಾದ ಸ್ಥಳದಂಚಿನಲ್ಲೇ ಸೋಮವಾರ ರಾತ್ರಿ ಗುಡ್ಡ ಕುಸಿದಿದ್ದು ಮಂಗಳವಾರ ಬೆಳಗ್ಗೆ ಹೆದ್ದಾರಿ ಗುತ್ತಿಗೆದಾರ ಕಂಪನಿ ಆರ್‌ಎನ್‌ಎಸ್ ಸಿಬ್ಬಂದಿ ಮತ್ತು ಸ್ಥಳೀಯರು ಮಣ್ಣು ತೆರವುಗೊಳಿಸುವ ಕಾರ್ಯ ನಡೆಸಿದರು. ಎರಡು ಜೆಸಿಬಿ, ಹಿಟಾಚಿಗಳನ್ನು ಬಳಸಿ ಮಣ್ಣನ್ನು ಲಾರಿಗಳಲ್ಲಿತುಂಬಿ ಸಾಗಿಸಲಾಗುತ್ತಿದೆ. ಆದರೆ ಸಂಜೆವರೆಗೂ ಅರ್ಧದಷ್ಟು ಮಣ್ಣನ್ನು ತೆಗೆಯಲಾಗಿದ್ದು ಮತ್ತಮತ್ತೆ ಗುಡ್ಡದ ಮಣ್ಣು ಜಾರುತ್ತಿದ್ದು ಸಂಚಾರಕ್ಕೆ ರಸ್ತೆ ಖುಲ್ಲಾಮಾಡುವುದಕ್ಕೆ ಹರಸಾಹಸಪಡುವಂತಾಗಿದೆ.
ಶಿರಸಿ-ಕುಮಟಾ ಹೆದ್ದಾರಿ 766 ಇ ಬಂದ್ ಆಗಿದ್ದರಿಂದ ನಗರದ ನಿಲೇಕಣಿಯಲ್ಲಿ ಬ್ಯಾರಿಕೇಡ್ ಹಾಕಿ ಸಿದ್ದಾಪುರ ಮಾರ್ಗವಾಗಿ ವಾಹನಗಳನ್ನು ಕಳುಹಿಸಲಾಗುತ್ತಿದೆ. ಇನ್ನು ಕುಮಟಾ ಕಡೆಯಿಂದ ಬರುವ ವಾಹನಗಳನ್ನು ಕತಗಾಲ ಬಳಿಯೇ ತಡೆದು ಯಲ್ಲಾಪುರ ಮಾರ್ಗವಾಗಿ ಬಿಡಲಾಗುತ್ತಿದೆ.
ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ- ಮಾದನಗೇರಿ ಕ್ರಾಸ್‌ನಿಂದ – ಹಿಲ್ಲೂರು- – ಹೊಸಕಂಬಿ ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಪ್ರಯಾಣಿಸಬಹುದು. ಶಿರಸಿ-ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿದೆ.

