ಢಾಕಾ : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು ಇದುವರೆಗೆ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ದೇಶದ ಹಲವು ನಗರಗಳನ್ನು ಹಿಂಸಾಚಾರ ಆವರಿಸಿದೆ.
ಕಳೆದ ತಿಂಗಳು, ಜೂನ್ 5 ರಂದು, ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಆದೇಶಿಸಿತು. ಶೇಖ್ ಹಸೀನಾ ಸರ್ಕಾರವೂ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು, ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಬಾಂಗ್ಲಾದೇಶದ ವಿಶ್ವವಿದ್ಯಾಲಯಗಳಿಂದ ಆರಂಭವಾದ ಈ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಢಾಕಾದಲ್ಲಿನ ರಾಜ್ಯ ಸರ್ಕಾರ ಸುದ್ದಿವಾಹಿನಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದ್ದಾರೆ, ಪ್ರಧಾನ ಕಚೇರಿಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಸಹ ನಾಶಪಡಿಸಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚುವಂತೆ ಶೇಖ್ ಹಸೀನಾ ಸರ್ಕಾರ ಆದೇಶಿಸಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಬಿಗಿ ಬಂದೋಬಸ್ತ್ ಮಾಡುವಂತೆ ಸೂಚನೆ ನೀಡಲಾಗಿದೆ.
ಭಾರತೀಯರಿಗೆ ಹೊರಬಾರದಂತೆ ಸೂಚನೆ :
ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕಾರರ ಹಿಂಸಾಚಾರದಿಂದಾಗಿ ಶಾಲಾ-ಕಾಲೇಜುಗಳು, ಕಚೇರಿಗಳು ಕೂಡ ಮುಚ್ಚಲ್ಪಟ್ಟಿವೆ. ಭಾರೀ ಹಿಂಸಾಚಾರದ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಬಾಂಗ್ಲಾದೇಶದಲ್ಲಿರುವ ಭಾರತೀಯರಿಗೆ ಸಲಹೆ ನೀಡಿದೆ.
ಭಾರತೀಯ ಸಮುದಾಯದ ಜನರಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ರಾಯಭಾರ ಕಚೇರಿಯು ಹೇಳಿದೆ. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ವಾಸಿಸುವ ಭಾರತೀಯ ಸಮುದಾಯದ ಜನರು ಮತ್ತು ವಿದ್ಯಾರ್ಥಿಗಳು ಪ್ರಯಾಣವನ್ನು ತಪ್ಪಿಸಲು ಮತ್ತು ತಮ್ಮ ವಸತಿ ಆವರಣದ ಹೊರಗಿನ ಓಡಾಟವನ್ನು ಕಡಿಮೆ ಮಾಡಲು ಸಲಹೆ ನೀಡಿದೆ. ಅಲ್ಲದೆ ಯಾವುದೇ ತುರ್ತು ಅಥವಾ ಸಹಾಯದ ಅಗತ್ಯವಿದ್ದಲ್ಲಿ 24 ಗಂಟೆಗಳ ಕಾಲ ಸೇವೆ ಸಲ್ಲಿಸಲು ಹೈಕಮಿಷನ್ ಮತ್ತು ಸಹಾಯಕ ಹೈಕಮಿಷನ್‌ಗಳನ್ನು ಸಿದ್ಧವಾಗಿದೆ ಎಂದು ತಿಳಿಸಿದೆ. ಭಾರತೀಯ ರಾಯಭಾರ ಕಚೇರಿಯಿಂದ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ.

