ಮೈಸೂರು: ನಾನೇನು ತಪ್ಪು ಮಾಡಿಲ್ಲ, ರಾಜ್ಯಪಾಲರ ಶೋಕಾಸ್ ನೋಟೀಸ್ ಗೆ ಹೆದರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಹಗರಣ ಸಂಬಂಧ ರಾಜ್ಯಪಾಲರು ಶೋಕಾಸ್ ನೀಡಿರುವ ವಿಚಾರವಾಗಿ ಅವರು ಕಿಡಿ ಕಾರಿದ ಅವರು ಶೋಕಾಸ್ ನೋಟಿಸ್’ಗೆ ನಾನು ಹೆದರಲ್ಲ. ಇದನ್ನೆಲ್ಲ ಎದುರಿಸಲು ಸಿದ್ಧರಾಗಿದ್ದೇವೆ. ತಪ್ಪು ಮಾಡಿದ್ದರೆ ತಾನೇ ಹೆದರುವುದು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು ನಾನು. ನನ್ನ ಪಾತ್ರ ಇಲ್ಲದಿದ್ದರೂ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ. ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಯುತ್ತಿದೆ. ಕಾನೂನು ಬಾಹಿರವಾಗಿ ಸಂವಿಧಾನಕ್ಕೆ ವಿರುದ್ಧವಾದ ನಡವಳಿಕೆಯನ್ನು ಅನುಸರಿಸಲಾಗಿದ್ದು, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಹುನ್ನಾರವಾಗಿದೆ. ನನ್ನ ಪಾತ್ರ ಇಲ್ಲದೇ ಇದ್ದರೂ ಅನಗತ್ಯವಾಗಿ ನೋಟಿಸ್ ನೀಡಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಪುಟದ ಸಲಹೆ ಮೇರೆಗೆ ರಾಜ್ಯಪಾಲರು ಕೆಲಸ ಮಾಡಬೇಕು. ಈ ವಿಚಾರವಾಗಿ ಸಂಪುಟದ ಸಲಹೆ ಕೇಳಿಲಿಲ್ಲ. ನಾವು ನೀಡಿಲ್ಲ. ಆದರೂ ನೋಟಿಸ್ ಕೊಟ್ಟಿದ್ದೇಕೆ? ಮುಡಾ ನಿವೇಶನ ಹಂಚಿಕೆ ಹಗರಣಗಳನ್ನು ತನಿಖೆ ನಡೆಸಲು ಜು.14ರಂದು ನ್ಯಾಯಾಂಗ ಆಯೋಗ ರಚಿಸಲಾಗಿದೆ. ಅದರ ವರದಿ ಬಂದಿಲ್ಲ ಎಂದು ತಿಳಿಸಿದರು.

