ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಒಲಿಂಪಿಕ್ಸ್ ಸ್ಪರ್ಧಿಗಳನ್ನು ದೆಹಲಿಯ ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು 2024ರ ಪ್ಯಾರಿಸ್ ಒಲಿಂಪಿಕ್ಸ್ಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪಡೆ ತಮ್ಮ ಅಸಾಧಾರಣ ಪ್ರದರ್ಶನವನ್ನು ಪ್ರದರ್ಶಿಸಿದೆ. ಪ್ರತಿಯೊಬ್ಬ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅವರ ಸಾಧನೆಗಳಿಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು, ವಿಶೇಷವಾಗಿ ಭಾರತೀಯ ಪುರುಷರ ಹಾಕಿ ತಂಡ, ಡಬಲ್-ಕಂಚಿನ ಪದಕ ಗೆದ್ದ ಮನು ಭಾಕರ್, ಸರಬ್ಜೋತ್ ಸಿಂಗ್ ಮತ್ತು ಅಮನ್ ಸೆಹ್ರಾವತ್ ಅವರ ಅತ್ಯತ್ತಮ ಪ್ರದರ್ಶನವನ್ನು ಪ್ರಧಾನಿ ಶ್ಲಾಘಿಸಿದರು. ಪ್ರಧಾನಿ ಮೋದಿ ಅವರು ಅಥ್ಲೀಟ್‌ಗಳೊಂದಿಗೆ ಸಂವಾದದಲ್ಲಿ ತೊಡಗಿದ್ದರು. ಅವರ ಕಷ್ಟಗಳು, ನೆಚ್ಚಿನ ಆಹಾರಗಳು ಮತ್ತು ಅಡ್ಡಹೆಸರುಗಳ ಬಗ್ಗೆ ಕೇಳಿದರು. ಕ್ರೀಡಾಕೂಟದುದ್ದಕ್ಕೂ ತಾವು ಮೊಬೈಲ್ ಫೋನ್ ಬಳಸಲಿಲ್ಲ ಎಂದು ಅಥ್ಲೀಟ್‌ಗಳು ಪ್ರಧಾನಿಗೆ ತಿಳಿಸಿದರು.
ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ಕ್ರೀಡಾಪಟುಗಳು ಧನ್ಯವಾದ ಅರ್ಪಿಸಿದರು. ಗಾಯಗಳ ಸಂಖ್ಯೆ ಕಡಿಮೆಯಾಗಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕುಸ್ತಿಪಟುಗಳಲ್ಲಿ ಒಬ್ಬರಾದ ರಿತಿಕಾ ಹೂಡಾ ತಮ್ಮ ಸೋಲಿನ ಬಗ್ಗೆ ದುಃಖ ವ್ಯಕ್ತಪಡಿಸಿದಾಗ, ಪ್ರಧಾನಿ ಮೋದಿ ಅವರಗೆ ಧೈರ್ಯ ತುಂಬಿದರು. ‘ನೀವು ತುಂಬಾ ಚಿಕ್ಕವರು, ನೀವು ಸಾಕಷ್ಟು ದೂರ ಹೋಗಬೇಕಾಗಿದೆ. ಅಭ್ಯಾಸ ಮುಂದುವರಿಸಿ’ ಎಂದು ಮೋದಿ ಹೇಳಿದರು.
ವಿನೇಶ್ ಫೋಗಟ್ ಕುರಿತು ಪ್ರಧಾನಿ ಮೋದಿ ಮಾತನಾಡಿದರು. ಒಲಿಂಪಿಕ್ ಪದಕ ಗೆಲ್ಲುವ ಅವರ ಕನಸು ಈಡೇರಲಿಲ್ಲ, ಬೆಳ್ಳಿ ಪದಕಕ್ಕಾಗಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೇಲ್ಮನವಿ ಕೂಡ ವಜಾಗೊಂಡಿತು. ಪದಕ್ಕಾಗಿ ಹೋರಾಡಿದ ವಿನೇಶ್ ಫೋಗಟ್ರನ್ನು ಪ್ರಧಾನಿ ಮೋದಿ ‘ಧೈರ್ಯಶಾಲಿ ಮಗಳು’ ಎಂದಿದ್ದಾರೆ.

