ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಅವರು ಕಡಿಮೆ ಸಮಯದಲ್ಲಿ ಲಾಭ ಗಳಿಸುವುದಾಗಿ ಭರವಸೆ ನೀಡಿ ಗ್ರಾಮಸ್ಥರಿಂದ ನೂರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಅನೇಕ ಜನರ ವಿರುದ್ಧ ದೂರುಗಳು ದಾಖಲಾಗಿವೆ.
ಪುಷ್ಪ 2 ರ ಹಿಂದಿ ಆವೃತ್ತಿಯಲ್ಲಿ ಅಲ್ಲು ಅರ್ಜುನ್ ಪಾತ್ರಕ್ಕೆ ಅವರು ಡಬ್ ಮಾಡಿದ್ದಾರೆ. ತಮ್ಮ ಸಹಜ ನಟನೆಯಿಂದ ಪ್ರೇಕ್ಷಕರನ್ನು ರಂಜಿಸಿದ್ದ ಈ ನಟ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನೂರಾರು ಕೋಟಿ ರೂಪಾಯಿಗಳ ಹಗರಣದ ಆರೋಪದ ಮೇಲೆ ಶ್ರೇಯಸ್ ತಲ್ಪಡೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ವಂಚನೆ ಕಳೆದ ಒಂದು ದಶಕದಿಂದ ನಡೆಯುತ್ತಿದೆ. ವಂಚನೆ ಬೆಳಕಿಗೆ ಬಂದ ನಂತರ, ಸಂಬಂಧಿತ ಅಧಿಕಾರಿಗಳು ದೂರು ದಾಖಲಿಸಿದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಮತ್ತು ಇತರ 14 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಶ್ರೇಯಸ್ ತಲ್ಪಡೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳು ಆಧಾರರಹಿತ ಎಂದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರ ತಂಡದವರು ಸ್ಪಷ್ಟನೆ ನೀಡಿದ್ದಾರೆ. ಬೇರೆ ಎಲ್ಲ ಸೆಲೆಬ್ರಿಟಿಗಳ ರೀತಿ ಶ್ರೇಯಸ್ ತಲ್ಪಡೆ ಅವರಿಗೂ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತದೆ. ಸಾಧ್ಯವಾದಾಗ ಅವರು ಅಂತಹ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಅದನ್ನು ಹೊರತುಪಡಿಸಿದರೆ ಅವರಿಗೆ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟನೆ ನೀಡಲಾಗಿದೆ.

