ಆನೇಕಲ್, ಜನವರಿ 8: ಕಣ್ಣು ನೋವಿನ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಹಾಕಿದ್ದಕ್ಕೆ ತರಗತಿಯಲ್ಲಿ ಅವಮಾನಿಸಿ ಕಿರುಕುಳ ನೀಡಲಾಗಿದೆ ಎಂಬ ಆರೋಪದ ನಡುವೆ ಡೆಂಟಲ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.
ಮೃತಳನ್ನು ಪರಿಮಳ–ಭೋದೆವಯ್ಯ ದಂಪತಿಯ ಪುತ್ರಿ ಯಶಸ್ವಿನಿ (23) ಎಂದು ಗುರುತಿಸಲಾಗಿದೆ. ಅವರು ಬೊಮ್ಮನಹಳ್ಳಿ ಖಾಸಗಿ ಕಾಲೇಜಿನಲ್ಲಿ Oral Medicine and Radiology ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದರು ಎಂದು ತಿಳಿದುಬಂದಿದೆ.
ಬುಧವಾರ (ಜ.7) ಕಣ್ಣು ನೋವಿನಿಂದಾಗಿ ಯಶಸ್ವಿನಿ ಕಾಲೇಜಿಗೆ ರಜೆ ಹಾಕಿದ್ದರು. ಮಾರನೇ ದಿನ ಕಾಲೇಜಿಗೆ ಹಾಜರಾದಾಗ, “ಯಾವ ಕಣ್ಣಿನ ಡ್ರಾಪ್ಸ್ ಬಳಸಿದೆ? ಎಷ್ಟು ಹನಿ ಹಾಕಿಕೊಂಡೆ? ಇಡೀ ಬಾಟಲ್ ಸುರಿದುಕೊಂಡ್ಯಾ?” ಎಂದು ಉಪನ್ಯಾಸಕರು ಸಹಪಾಠಿಗಳ ಮುಂದೆ ಪ್ರಶ್ನಿಸಿ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೇ ಸೆಮಿನಾರ್‌ಗೆ ಅವಕಾಶ ನೀಡದೆ, ರೆಡಿಯಾಲಜಿ ಕೇಸ್ ನೀಡದೇ ನಿರಂತರ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗಿದೆ.
“ನನ್ನ ಮಗಳಿಗೆ ಕಣ್ಣಿಗೆ ಗಾಯವಾಗಿತ್ತು. ನನ್ನಿಗೆ ತಿಳಿಸಿ ಅವಳು ರಜೆ ತೆಗೆದುಕೊಂಡಿದ್ದಾಳೆ. ಆದರೆ ತರಗತಿಯಲ್ಲಿ ಅವಮಾನಿಸಲಾಗಿದೆ. ಇದನ್ನೆಲ್ಲಾ ಅವಳು ನನಗೆ ಹೇಳಿದ್ದಾಳೆ. ಉಪನ್ಯಾಸಕರಷ್ಟೇ ಅಲ್ಲ, ಕಾಲೇಜು ಆಡಳಿತ ಮಂಡಳಿಯೂ ಕಿರುಕುಳ ನೀಡಿದೆ. ಇದೇ ಕಾರಣಕ್ಕೆ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,” ಎಂದು ಮೃತ ವಿದ್ಯಾರ್ಥಿನಿಯ ತಾಯಿ ಕಣ್ಣೀರಿಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿ ಟಾರ್ಚರ್ ನೀಡಿದ ಪ್ರಾಂಶುಪಾಲ ಹಾಗೂ ಅವಮಾನಿಸಿದ ಉಪನ್ಯಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೃತ ವಿದ್ಯಾರ್ಥಿನಿಯ ಸಹಪಾಠಿಗಳು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣದ ಕುರಿತು ಚಂದಾಪುರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

