Blackbuck Death : ಬೆಳಗಾವಿಯ ಕಿತ್ತೂರು ಚೆನ್ನಮ್ಮ ಕಿರುಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರೆದಿದೆ. ಇಂದು ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಕೃಷ್ಣಮೃಗಗಳ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಬೆಳಗಾವಿಯ ಭೂತರಾಯನಹಟ್ಟಿ ಬಳಿಯ ಕಿತ್ತೂರು ಚೆನ್ನಮ್ಮ ಕಿರು ಮೃಗಾಲಯದಲ್ಲಿ ನವೆಂಬರ್ 13 ರಂದು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ನಿನ್ನೆ ಒಂದೇ ದಿನ 20 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಮತ್ತೊಂದು ಕೃಷ್ಣಮೃಗ ಮೃತಪಟ್ಟಿದೆ. ಕೃಷ್ಣಮೃಗಗಳ ನಿಗೂಢ ಸಾವು ಮೃಗಾಲಯದಲ್ಲಿ ಆತಂಕ ಮೂಡಿಸಿದೆ.
ಮೃಗಾಲಯಕ್ಕೆ ತಜ್ಞರ ತಂಡ ಭೇಟಿ :
ತಾಲ್ಲೂಕಿನ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭಾನುವಾರ ಭೇಟಿ ನೀಡಿದ ತಜ್ಞರ ತಂಡವು ನಾಲ್ಕು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿತು. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಬೆಂಗಳೂರು ಶಾಖೆಯ ತಜ್ಞ ಡಾ.ಚಂದ್ರಶೇಖರ ಎನ್., ಬನ್ನೇರುಘಟ್ಟ ಶಾಖೆ ತಜ್ಞ ಡಾ.ಮಂಜುನಾಥ ವಿ., ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಸುನೀಲ್ ಪನ್ಸಾರ್ ಅವರ ತಂಡ ಭಾನುವಾರ ಬೆಳಿಗ್ಗೆ ಕಿರು ಮೃಗಾಲಯಕ್ಕೆ ಭೇಟಿ ನೀಡಿತು.
ಬ್ಯಾಕ್ಟಿರಿಯಾ ಸೋಂಕಿನಿಂದ(ಗಳಲೆ ಕಾಯಿಲೆಯಿಂದ) ಗುರುವಾರ 20, ಶನಿವಾರ 8 ಕೃಷ್ಣಮೃಗ ಮೃತಪಟ್ಟಿದ್ದವು. ಈ ಪೈಕಿ 25 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಲಾಗಿತ್ತು. ಮೂರು ಕಳೇಬರಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಅವುಗಳ ಜತೆಗೆ, ಶನಿವಾರ ತಡರಾತ್ರಿ ಮೃತಪಟ್ಟ ಮತ್ತೊಂದು ಕೃಷ್ಣಮೃಗದ ಮರಣೋತ್ತರ ಪರೀಕ್ಷೆಯನ್ನು ತಜ್ಞರ ತಂಡ ನಡೆಸಿತು.
ಮುಂಜಾಗೃತಾ ಕ್ರಮವಾಗಿ ತಪಾಸಣೆ, ಚಿಕಿತ್ಸೆ :
ಈ ನಡುವೆ ಮೃಗಾಲಯದಲ್ಲಿರುವ ಉಳಿದ 9 ಕೃಷ್ಣಮೃಗಗಳಿಗೆ ಮುಂಜಾಗೃತಾ ಕ್ರಮವಾಗಿ ತಪಾಸಣೆ, ಚಿಕಿತ್ಸೆ ನೀಡಲಾಗುತ್ತಿದೆ. ಇತರ ಪ್ರಾಣಿಗಳಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

