ಎಆರ್ ರೆಹಮಾನ್ – ಈ ಹೆಸರು ಕೇಳಿದ ಕ್ಷಣದಲ್ಲೇ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಅಪಾರ ಗೌರವ ಮೂಡುತ್ತದೆ. ಕಳೆದ ಹಲವು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನಂಬರ್–1 ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರೆಹಮಾನ್, ಇಂದಿಗೂ ಸೂಪರ್ ಹಿಟ್ ಹಾಡುಗಳ ಮೂಲಕ ತಮ್ಮ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಇದೀಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಬ್ಯುಸಿಯಾಗಿರುವ ಎಆರ್ ರೆಹಮಾನ್, ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಿನಿಮಾ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಹಿಂದೆ ಆಲ್ಬಂ ಹಾಡುಗಳು ಹಾಗೂ ಯೂಟ್ಯೂಬ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರೂ, ಕಥಾ ಪ್ರಧಾನ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು.
ರೆಹಮಾನ್ ಅವರು ತಮಿಳಿನ ‘ಮೂನ್ ವಾಕ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ನಾಯಕ ಖ್ಯಾತ ನಟ ಹಾಗೂ ನೃತ್ಯಗಾರ ಪ್ರಭುದೇವ. ಪ್ರಭುದೇವ ಹಾಗೂ ರೆಹಮಾನ್ ನಡುವಿನ ಆತ್ಮೀಯ ಸ್ನೇಹವೇ ಈ ವಿಶೇಷ ನಿರ್ಧಾರಕ್ಕೆ ಕಾರಣವಾಗಿದೆ. ಮನೋಜ್ ಎನ್‌ಎಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಬಿಹೈಂಡ್ ವುಡ್ಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ನೃತ್ಯದ ಹಿನ್ನೆಲೆಯ ಮೇಲೆ ಸಾಗುವ ಹಾಸ್ಯ ಪ್ರಧಾನ ಕಥೆ ಹೊಂದಿರುವ ‘ಮೂನ್ ವಾಕ್’ ಚಿತ್ರದಲ್ಲಿ, ಎಆರ್ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಸಿನಿಮಾದಲ್ಲಿನ ಪಾತ್ರದ ಹೆಸರೂ ಸಹ ಎಆರ್ ರೆಹಮಾನ್ ಎಂದೇ ಇರಲಿದೆ.
ಇನ್ನೊಂದು ಕುತೂಹಲಕಾರಿ ಅಂಶವೆಂದರೆ, ‘ಮೂನ್ ವಾಕ್’ ಸಿನಿಮಾದ ಎಲ್ಲಾ ಐದು ಹಾಡುಗಳಿಗೆ ರೆಹಮಾನ್ ಅವರೇ ಧ್ವನಿ ನೀಡಿದ್ದಾರೆ. ಇದು ಅವರ ಕರಿಯರ್‌ನಲ್ಲೇ ಮೊದಲ ಬಾರಿಗೆ ಒಂದು ಸಂಪೂರ್ಣ ಸಿನಿಮಾ ಆಲ್ಬಂಗೆ ಸ್ವತಃ ಗಾಯನ ನೀಡಿರುವ ಸಾಧನೆಯಾಗಿದೆ.
ಈಗಾಗಲೇ ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣ ಮುಗಿಸಿರುವ ರೆಹಮಾನ್, ನಟನೆಯನ್ನು ತುಂಬಾ ಎಂಜಾಯ್ ಮಾಡಿದ್ದಾಗಿ ತಿಳಿಸಿದ್ದಾರೆ. ಇತ್ತ ‘ಪೆದ್ದಿ’ ಸಿನಿಮಾದ ಹಾಡುಗಳು ಭರ್ಜರಿ ಯಶಸ್ಸು ಕಂಡಿದ್ದು, ‘ರಾಮಾಯಣ’ ಸಿನಿಮಾಕ್ಕೂ ಸಂಗೀತ ನೀಡುತ್ತಿರುವ ಅವರು, ಪ್ರಸ್ತುತ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಿರತರಾಗಿದ್ದಾರೆ.

