ನೇಪಾಳ : ನೇಪಾಳದಲ್ಲಿ ಸೋಷಿಯಲ್ ಮೀಡಿಯಾಗೆ ನಿಷೇಧ ಹೇರಿದ್ದು, ಜನರಲ್-ಝೆಡ್ ಪ್ರತಿಭಟನಾಕಾರು ಕರ್ಪ್ಯೂ ನಿರ್ಬಂಧ ಮುರಿದು ಕಠ್ಮಂಡುವಿನ ಸಂಸತ್ ಕಚೇರಿಗೆ ನುಗ್ಗಿದ್ದು, ಹೋರಾಟ ಹಿಂಸಾತ್ಮಕ ರೂಪ ಪಡೆದು ಗೋಲಿಬಾರ್ ನಡೆದಿದೆ. ಘಟನೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸೋಮವಾರ (ಸೆ. 08) ವರದಿಯಾಗಿದೆ.
ಪ್ರತಿಭಟನಾಕಾರರ ಮೇಲೆ ಪೊಲೀಸರು, ಜಲಫಿರಂಗಿ, ಅಶ್ರುವಾಯು, ರಬ್ಬಲ್ ಗುಂಡುಗಳನ್ನು ಹಾರಿಸಿದ್ದಾರೆ. ಇದೇ ವೇಳೆ ಅನೇಕ ಹೋರಾಟಗಾರರು ಸಂಸತ್ ಆವರಣಕ್ಕೆ ನುಗ್ಗಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಕಠ್ಮಂಡು ಜಿಲ್ಲಾಡಳಿತ ಕರ್ಪ್ಯೂ ಅವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಸಾರ್ವಜನಿಕರ ಚಲನೆ, ಸಭೆ ಸೇರುವುದು, ಪ್ರತಿಭಟನೆಗಳು ಅಥವಾ ಸುತ್ತುವರಿದ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ರಾಷ್ಟ್ರಪತಿಗಳ ನಿವಾಸ (ಶೀತಲ್ ನಿವಾಸ್), ಲೈನ್‌ಚೌರ್‌ನಲ್ಲಿರುವ ಉಪಾಧ್ಯಕ್ಷರ ನಿವಾಸ, ಮಹಾರಾಜ್‌ಗುಂಜ್, ಸಿಂಘಾ ದರ್ಬಾರ್‌ನ ಎಲ್ಲಾ ಬದಿಗಳು, ಬಲುವಾತರ್‌ನಲ್ಲಿರುವ ಪ್ರಧಾನ ಮಂತ್ರಿಗಳ ನಿವಾಸ ಮತ್ತು ಪಕ್ಕದ ಪ್ರದೇಶಗಳಲ್ಲಿ ಸೇನೆ ಮತ್ತು ಹೆಚ್ಚುವರಿಯಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಪೋಖರಾದಲ್ಲಿ ಸ್ಥಳೀಯ ಅಧಿಕಾರಿಗಳು ಕರ್ಫ್ಯೂ ವಿಧಿಸಿದ್ದಾರೆ. ಅಲ್ಲಿಯೂ ಪ್ರತಿಭಟನಾಕಾರರು ಮುಖ್ಯಮಂತ್ರಿ ಕಚೇರಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ನೇಪಾಳ ಪ್ರಧಾನಿ ಕೆ.ಪಿ. ಓಲಿ ಈ ವಿಷಯದ ಕುರಿತು ತುರ್ತು ಸಂಪುಟ ಸಭೆ ಕರೆದಿದ್ದಾರೆ.
ನೇಪಾಳ ಸರ್ಕಾರ ದೇಶದಲ್ಲಿ ಸಾಮಾಜಿಕ ಭ್ರಷ್ಟಾಚಾರ, ತಪ್ಪು ಮಾಹಿತಿ ಹರಡುವಿಕೆ ತಡೆಯುವ ಸಲುವಾಗಿ ನಿಷೇಧ ಹೇರಲಾಗಿದೆ ಎಂದಿದ್ದು, ಜೊತೆಗೆ ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು ಎರಡು ಡಜನ್ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ತಮ್ಮ ಕಂಪನಿಗಳನ್ನು ದೇಶದಲ್ಲಿ ಅಧಿಕೃತವಾಗಿ ನೋಂದಾಯಿಸಲು ಪದೇ ಪದೇ ನೋಟಿಸ್ ನೀಡಿದೆ.
ಪರಿಣಾಮ ಬೀರಿದ ಕಂಪನಿಗಳಿಗೆ ನೇಪಾಳದಲ್ಲಿ ನೋಂದಾಯಿಸಲು, ಸಂಪರ್ಕ ಕೇಂದ್ರವನ್ನು ಸ್ಥಾಪಿಸಲು, ನಿವಾಸಿ ಕುಂದುಕೊರತೆ ನಿರ್ವಹಣಾ ಅಧಿಕಾರಿ ಮತ್ತು ಅನುಸರಣಾ ಅಧಿಕಾರಿಯನ್ನು ನೇಮಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದ್ಯಾವುದನ್ನೂ ಮಾಡದ ನೋಂದಾಯಿಸಲು ವಿಫಲವಾದ ಕಂಪನಿಗಳನ್ನು ಕಳೆದ ವಾರದಿಂದ ನಿರ್ಬಂಧಿಸಲಾಗಿದೆ ಎಂದು ಹೇಳಿದೆ.

