ಬಳ್ಳಾರಿ : ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್‌ಗೆ ಎಲ್ಲಾ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಒಂದು ವಾರದಿಂದ ರೈತರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ. ಸದ್ಯ ಡ್ಯಾಂನ ಎಲ್ಲಾ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಹೊರಹರಿವು 60 ಕ್ಯುಸೆಕ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕಾರ್ಯಾಚರಣೆ ನಡೆಸಿದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಟಿಬಿ ಡ್ಯಾಂ 19 ನೇ ಕ್ರಸ್ಟ್ ಗೇಟ್ ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯಾಚರಣೆ ಮೈ ಜುಮ್ಮೇನಿಸುತ್ತದೆ. ಕಾರ್ಮಿಕರುಜೀವದ ಹಂಗು ತೊರೆದು ಡ್ಯಾಂ ನಲ್ಲಿಳಿದು ಕಾರ್ಯಾಚರಣೆ ಮಾಡಿದ್ದಾರೆ. ತಜ್ಞರ ಸಲಹೆಯಂತೆ ಕಾರ್ಮಿಕರು ರಭಸವಾಗಿ ಹರಿಯೋ ನೀರಿನ ಮೇಲೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡದ ಸದಸ್ಯರಿಗೆ ಕೊಪ್ಪಳ ಸಂಸದ ಕೆ ರಾಜಶೇಖರ ಹಿಟ್ನಾಳ್ 2 ಲಕ್ಷ ರೂ ಗಳ ಬಹುಮಾನ ವಿತರಣೆ ಮಾಡಿದ್ದಾರೆ. ಇದೆ ವೇಳೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಗೇಟ್ ತಜ್ಞ ಕನ್ನಯ್ಯ ನಾಯ್ಡುಗೆ ವಿಶೇಷ ಧನ್ಯವಾದ ಅರ್ಪಿಸಲಾಯಿತು.
ಜೊತೆಗೆ ತುಂಗಭದ್ರಾ ಅಣೆಕಟ್ಟೆ ಗೇಟ್ ಅಳವಡಿಕೆ ತಂಡದಲ್ಲಿ ಕೆಲಸ ಮಾಡಿದ್ದ 35 ಮಂದಿಗೆ ತಲಾ 50 ಸಾವಿರ ರೂ. ಬಹುಮಾನ ನೀಡುವುದಾಗಿ ವಸತಿ ಸಚಿವ ಬಿ.ಝಡ್ ಜಮೀರ್ ಅಹಮದ್ ಖಾನ್ ಶನಿವಾರ ಘೋಷಿಸಿದ್ದಾರೆ.
ಶನಿವಾರ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್‌ಗೆ ಎಲ್ಲಾ 5 ಎಲಿಮೆಂಟ್‌ಗಳನ್ನು ಅಳವಡಿಕೆ ಮಾಡುವ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಗೇಟ್ ಮೂಲಕ ನೀರಿನ ಹೊರ ಹರಿವು ಬಂದ್ ಆಗಿದೆ. 4 ಅಡಿ ಎತ್ತರದ 5 ಎಲಿಮೆಂಟ್‌ಗಳನ್ನು ಕೂರಿಸಿ, ಗೇಟ್ ಮೂಲಕ ಹೊರಹೋಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

