ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ನೀತಿ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯಿಂದ ಪ್ರಧಾನಿ ಶೇಖ್ ಹಸೀನಾ ಅಧಿಕಾರ ತ್ಯಜಿಸಿ, ದೇಶ ತೊರೆದ ಬೆನ್ನಲ್ಲೇ ಪ್ರತಿಭಟನೆಗಳು ಇನ್ನೂ ನಿಂತಿಲ್ಲ. ಬಾಂಗ್ಲಾದೇಶದ ಪ್ರಧಾನಿಯ ಅಧಿಕೃತ ನಿವಾಸಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿ ಲೂಟಿ ಮಾಡಿದ್ದ ಪ್ರತಿಭಟನಾಕಾರರು ಈಗ ಅಲ್ಲಿನ ಸುಪ್ರೀಂಕೋರ್ಟ್, ಕೇಂದ್ರೀಯ ಬ್ಯಾಂಕ್ಗೂ ನುಗ್ಗಿ ದಂಗೆ ಎದ್ದಿದ್ದರಿಂದ ಅವುಗಳ ಮುಖ್ಯಸ್ಥರೂ ರಾಜೀನಾಮೆ ನೀಡಿದ್ದಾರೆ.
ಸಿಜೆಐ ಒಬೈದುಲ್ ಹಸನ್ ತಮ್ಮ ಸ್ಥಾನಕ್ಕೆ ಶನಿವಾರ ಮಧ್ಯಾಹ್ನ ರಾಜೀನಾಮೆ ನೀಡಿದರು. ಅಂತಿಮ ಗಡುವಿಗೂ ಮುನ್ನ ರಾಜೀನಾಮೆ ನೀಡದಿದ್ದರೆ ನ್ಯಾಯಾಧೀಶರ ಕಟ್ಟಡಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಉದ್ವಿಗ್ನತೆ ಹೆಚ್ಚಾಗುವುದನ್ನು ಗಮನಿಸಿದ ಸಿಜೆಐ ಕಟ್ಟಡದಿಂದ ನಿರ್ಗಮಿಸಿದರು.
ಇದಲ್ಲದೆ ಬಾಂಗ್ಲಾದೇಶದ ಕೇಂದ್ರೀಯ ಬ್ಯಾಂಕ್ ಗವರ್ನರ್ ಅಬ್ದುರ್ ರೌಫ್ ತಲುಕ್ದರ್ ಕೂಡ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಸ್ಥಾನದ ಮಹತ್ವ ಹಾಗೂ ಅಗತ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ಸ್ವೀಕೃತವಾಗಿಲ್ಲ ಎಂದು ಹಣಕಾಸು ಸಚಿವಾಲಯದ ಸಲಹೆಗಾರ ಸಲೆಹುದ್ದೀನ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಢಾಕಾದಲ್ಲಿನ ಬ್ಯಾಂಕ್ ಪ್ರಧಾನ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ರಾಜೀನಾಮೆಗೆ ಆಗ್ರಹಿಸಿದ್ದರು.
ಕಳೆದ ಒಂದು ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ 450ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಶೇಖ್ ಹಸೀನಾ ನೇತೃತ್ವದ ಸರ್ಕಾರ ಆ. 6ರಂದು ಪತನಗೊಂಡ ಬಳಿಕ ಅಲ್ಲಿನ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ವರ್ಗದ ಮೇಲೆ ಹಲ್ಲೆ ಪ್ರಕರಣಗಳು 205ಕ್ಕೂ ಅಧಿಕ ನಡೆದಿವೆ ಎಂದು ಬಾಂಗ್ಲಾದೇಶ್ ಹಿಂದು ಬುದ್ಧಿಸ್ಟ್ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್ ಮತ್ತು ಬಾಂಗ್ಲಾದೇಶ್ ಪೂಜಾ ಉಡ್ಜಾಪನ್ ಪರಿಷದ್ ಸಂಘಟನೆಗಳು ತಿಳಿಸಿವೆ.

