ಢಾಕಾ: ಬಂಧನದಲ್ಲಿರುವ ಬಾಂಗ್ಲಾದೇಶದ ಇಸ್ಕಾನ್‌ನ ಮಾಜಿ ಸದಸ್ಯ ಹಾಗೂ ಹಿಂದೂ ಚಳುವಳಿ ಮುಖಂಡ ಚಿನ್ಮಯ್ ಕೃಷ್ಣ ದಾಸ್ ಅವರನ್ನೂ ಸೇರಿದಂತೆ ಒಟ್ಟು 17 ಹಿಂದೂ ನಾಯಕರ ಬ್ಯಾಂಕ್ ಖಾತೆಯನ್ನು 30 ದಿನಗಳವರೆಗೆ ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶ ಹಣಕಾಸು ಗುಪ್ತಚರ ಘಟಕ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್ ಭಾಗವಾಗಿರುವ ಬಿಎಫ್‌ಐಯು, ಮುಂದಿನ ಮೂರು ದಿನಗಳಲ್ಲಿ ಬಂಧಿತ ವ್ಯಕ್ತಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆ, ಆಸ್ತಿ ಹಾಗೂ ಅವರ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯ ವಿವರಣೆಗಳನ್ನು ನೀಡುವಂತೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.
ಅ. 30ರಂದು ಬಾಂಗ್ಲಾದೇಶದ ಚಟ್ಟೋಗ್ರಾಮ್‌ನ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಮಾಜಿ ಇಸ್ಕಾನ್ ಸದಸ್ಯ ಚಿನ್ಮಯ್ ದಾಸ್ ಸೇರಿದಂತೆ 19 ವ್ಯಕ್ತಿಗಳ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ. ಚಟ್ಟೋಗ್ರಾಮ್‌ನ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಹಿಂದೂ ಸಮುದಾಯದ ರ‍್ಯಾಲಿಯಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಅವರ ಮೇಲೆ ದೇಶದ್ರೋಹದ ಕೇಸ್ ಹಾಕಲಾಗಿದೆ.
ಕೇಸ್ ದಾಖಲಾಗುತ್ತಿದ್ದಂತೆ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲು ಬಾಂಗ್ಲಾ ಸರ್ಕಾರ ಸೂಚನೆ ನೀಡಿತ್ತು. ಅವರು ಬಾಂಗ್ಲಾ ತೊರೆದು ಭಾರತಕ್ಕೆ ಬರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಚಿನ್ಮಯ್ ದಾಸ್ ಅವರನ್ನು ಸರ್ಕಾರದ ಸೂಚನೆ ಮೇರೆಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ನಂತರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವರ ಬಂಧನದ ನಂತರ ಬಾಂಗ್ಲಾದಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ದೇಶದಾತ್ಯಂತ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದಾರೆ.